ಚೀಟ್ ಫಂಡ್ ವಂಚನೆ: 2 ಕೋಟಿ ರೂ ಉಂಡೆನಾಮ

ಈ ವಂಚಕ ಚಿಟ್‌ಫಂಡ್ ಹೆಸರಿನಲ್ಲಿ ಬರೋಬ್ಬರಿ 2 ಕೋಟಿ ರೂ. ಸಂಗ್ರಹಿಸಿ, ಇದೀಗ ಕುಟುಂಬ ಸಮೇತ ಪರಾರಿಯಾಗಿದ್ದಾನೆ. ಎಂದಿನಂತೆ, ಚಿಟ್‌ಫಂಡಿನಲ್ಲಿ ಹಣ ಹೂಡಿದ್ದವರು ಮೋಸ ಹೋಗಿ ಕಂಗಾಲಾಗಿದ್ದಾರೆ. ದೌರ್ಭಾಗ್ಯವೆಂದರೆ ಮೋಸ ಹೋದವರಲ್ಲಿ ರಿಕ್ಷಾ ಚಾಲಕರು ಮತ್ತು ಸಣ್ಣಪುಟ್ಟ ಅಂಗಡಿಗಳವರೇ ಅಧಿಕ. ಆರೋಪಿಯ ಸಂಬಂಧಿಕರೊಬ್ಬರು 4.5 ಲಕ್ಷ ರೂ. ಗಳಷ್ಟು ಮೋಸ ಹೋಗಿದ್ದಾರೆ ಎನ್ನಲಾಗಿದೆ.
ತಮಗೆ ವಂಚನೆ ಆಗಿದ್ದರೂ ಪೊಲೀಸ್ ಠಾಣೆಗೆ ದೂರು ನೀಡಲು ಯಾರೂ ಮುಂದೆ ಬಾರದೆ ಇರುವುದರಿಂದ ಯಾರಿಗೆ ಎಷ್ಟೆಷ್ಟು ನಷ್ಟವಾಗಿದೆ ಎಂಬ ಖಚಿತವಾದ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ. ಐದಾರು ವರ್ಷಗಳಿಂದ ಈ ವಂಚಕನು ಅಮಾಯಕರಿಂದ ಅನುಮಾನ ಬಾರದ ರೀತಿ ತಲಾ 20-30 ಸಾವಿರ ರುಪಾಯಿ ವಸೂಲಿ ಮಾಡಿದ್ದ.
ಮಂಗಲೂರಿನ ಡೊಂಗರಕೇರಿಯಲ್ಲಿ ಗಣೇಶ ಮಂದಿರದ ಸಮೀಪ ವಾಸವಾಗಿದ್ದ ಆರೋಪಿಯು ಕಳೆದ ಒಂದು ವಾರದಿಂದ ಚಿಟ್‌ಫಂಡ್ ಕಲೆಕ್ಷನ್‌ಗೆ ಬಂದಿಲ್ಲ. ಹಾಗೆಂದು ಸಂಶಯದಿಂದ ಬುಧವಾರ ಆತನ ಮನೆಗೆ ಹೋದಾಗ ಮನೆಗೆ ಬೀಗ ಜಡಿದಿತ್ತು. ವಾರದ ಹಿಂದೆ ಆತ ತನ್ನ ಕುಟುಂಬ ಸಮೇತ ಸ್ಥಳ ಖಾಲಿ ಮಾಡಿದ್ದಾನೆ. ಲಕ್ಷಾಂತರ ರುಪಾಯಿಗೆ ಅವನು ನೀಡಿದ್ದ ಬ್ಯಾಂಕ್ ಚೆಕ್ಕುಗಳು ಚೆಂಡಿನಂತೆ ಹಣ ಕಳೆದುಕೊಂಡವರ ಹಣೆಗಳಿಗೆ ಬಡಿಯುತ್ತಿದೆ. ಬಂದರ್ ಪೊಲೀಸರು ಪ್ರಕರಣದ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications