ಸುನಾಮಿಯಂತೆ ಅಪ್ಪಳಿಸಲು ಯಡಿಯೂರಪ್ಪ ರೆಡಿ

ಬಜೆಟ್ ಅಧಿವೇಶನ ಮುಗಿಯುತ್ತಿರುವ ಮಾರ್ಚ್ 30ರಂದೇ ಬಿಜೆಪಿಯ 121 ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಲು ಯಡಿಯೂರಪ್ಪ ಸಿದ್ಧರಾಗುತ್ತಿದ್ದು, ತಮ್ಮ ವಿರೋಧಿ ರಾಜ್ಯ ನಾಯಕರ ವಿರುದ್ಧ ಮತ್ತು ಬಿಜೆಪಿ ಹೈಕಮಾಂಡಿನ ವಿರುದ್ಧ ಮತ್ತೆ ತಿರುಗಿ ನಿಂತಿದ್ದಾರೆ. ಸದಾನಂದ ಗೌಡ ಮಂಡಿಸಿದ್ದ ಬಜೆಟ್ಟಿಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯದಂತೆ ಮಾಡಲು ಸರ್ವಯತ್ನ ನಡೆಸುತ್ತಿದ್ದಾರೆ.
ಬುಧವಾರ ಸಂಜೆಯೇ ದೆಹಲಿಗೆ ಯಡಿಯೂರಪ್ಪನವರು ದೌಡಾಯಿಸುವ ಸಂಭವನೀಯತೆಯಿದೆ. ಬಲ್ಲ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಪಟ್ಟಕ್ಕೆ ಮತ್ತೆ ಗಾಳ ಹಾಕಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಈ ಬಾರಿ ಒಲಿಯದಿದ್ದರೆ ಮುಂದಿನ ತಿಂಗಳು ಶಿವಮೊಗ್ಗದಲ್ಲಿ ಅವರು ನಡೆಸಲಿರುವ ಸಭೆಯಲ್ಲಿ ಮುಂದಿನ ನಡೆಯನ್ನು ಪ್ರಕಟಗೊಳಿಸಲಿದ್ದಾರೆ.
ಕೆಲ ದಿನಗಳ ಹಿಂದೆ ನವದೆಹಲಿಗೆ ತೆರಳಿ ಹಿರಿಯ ನಾಯಕರನ್ನು ಭೇಟಿಯಾಗಿ ಬಂದಿದ್ದ ಯಡಿಯೂರಪ್ಪ ಬರಿಗೈಯಲ್ಲಿ ಮರಳಿ ಬಂದಿದ್ದರು. ಬಜೆಟ್ ಅಧಿವೇಶನ ಮುಗಿಯುವವರೆಗೆ ಸುಮ್ಮನಿರಬೇಕೆಂದು ಕಿವಿಮಾತು ಹೇಳಿಸಿಕೊಂಡು ಕೂಡ ಬಂದಿದ್ದರು. ಆದರೆ, ಬಜೆಟ್ ಅಧಿವೇಶನ ಮುಗಿಯುವ ಮೊದಲೇ ಅವರು ಹೈಕಮಾಂಡಿಗೆ ಸೆಡ್ಡು ಹೊಡೆದಿದ್ದಾರೆ. ಉನ್ನತ ಹುದ್ದೆ ದೊರೆಯದಿದ್ದರೆ ಏಪ್ರಿಲ್ ತಿಂಗಳಲ್ಲಿ ಸಾಮೂಹಿಕ ರಾಜೀನಾಮೆ ನೀಡಲು ಕೂಡ ಅವರು ಬೆಂಬಲಿಗ ಶಾಸಕರಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.











Click it and Unblock the Notifications