ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನೈತಿಕ ಸಂಬಂಧ ಒಂಟಿ ಮಹಿಳೆಯ ಪ್ರಾಣ ನೀಗಿತ್ತು

By Srinath
|
Google Oneindia Kannada News

illicit-relationship-bangalore-lone-woman-murder-solved
ಬೆಂಗಳೂರು,ಮಾ. 25: ಅವನೋ 15 ವರ್ಷದಿಂದ ಆ ಹೆಂಗಸಿನ ಜತೆ ಸಂಬಂಧವಿಟ್ಟುಕೊಂಡಿದ್ದ. ಆದರೂ ಐದು ವರ್ಷದ ಹಿಂದೆ ಬೇರೊಬ್ಬ ಯುವತಿಯನ್ನು ಮದ್ವೆಯಾದ. ಆದರೆ ಆಕೆಗೆ ಗಂಡನ ಪೂರ್ವಾಶ್ರಮದ ವಾಸನೆ ಬಡಿಯಿತು. ಏನೋನೋ ಕಸರತ್ತು ಮಾಡಿ, ಬೇಡ ಕಣ್ರಿ ಅವಳ ಸಹವಾಸ. ನಮ್ಮ ಸಂಸಾರ ನಮಗೆ ಎಂದು ತಿಳಿಹೇಳಿದಳು. ಆ ಹೆಂಗಸಿಗೂ ಹಲವು ಬಾರಿ ಎಚ್ಚರಿಕೆ ನೀಡಿದ್ದಾಳೆ. ಆದರೆ ಅವ, ಅವಳಿಂದ ಬಿಡುಗಡೆ ಬಯಸಲಿಲ್ಲ.

ಸರಿ ಈಕೆಗೂ ರೋಸಿ ಹೋಗಿತ್ತು. ತಮ್ಮನನ್ನು ಕರೆದು ಇಂತೆಂದಳು - ನೋಡು ನಿಮ್ಮ ಭಾವ ಇದಾನಲ್ಲ. ಅವಯ್ಯ ಎಷ್ಟು ಹೇಳಿದರೂ ಕೇಳುತ್ತಿಲ್ಲ. ಅದ್ಯಾರೋ ಹೆಂಗಸಿನೊಂದಿಗೆ ಸಂಬಂಧವಿಟ್ಟುಕೊಂಡಿದ್ದಾನೆ. ಇನ್ನು ನನ್ನ ಕೈಯಲ್ಲಿ ಸಹಿಸೋಕೆ ಆಗೊಲ್ಲ. ಹೇಗಾದರೂ ಮಾಡಿ, ಅವಳನ್ನು ಇಲ್ಲವಾಗಿಸು ಎಂದು ಸುಪಾರಿ ಕೊಟ್ಟೇ ಬಿಟ್ಟಳು. ಮುಂದ... ಪ್ರಕರಣ ಭೇದಿಸಿದ ರಾಮಮೂರ್ತಿ ನಗರ ಪೊಲೀಸರು ಏನು ಹೇಳುತ್ತಾರೋ ಕೇಳಿ...

ವೃತ್ತಿಯಿಂದ ಬ್ಯೂಟಿಷಿಯನ್ ಆಗಿದ್ದ ನಿರ್ಮಲಾ ಎಂಬ ಮಹಿಳೆಯನ್ನು ಕಳೆದ ತಿಂಗಳು (ಫೆ.27) ಮಟಮಟ ಮಧ್ಯಾಹ್ನ ಯರಯ್ಯನಪಾಳ್ಯದ ಆಕೆಯ ಮನೆಯಲ್ಲಿ ಕೊಲೆ ಮಾಡಿ, ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದಾಗ...

ಆ ಒಂಟಿ ಮಹಿಳೆಯ ಕೊಲೆ ಪ್ರಕರಣ ಸಂಬಂಧ ಹತ್ಯೆಯ ರೂವಾರಿ ಮಹಿಳೆ ಸೇರಿ 13 ಮಂದಿಯನ್ನು ಬಂಧಿಸಲಾಗಿದೆ. ಮಾರತ್‌ಹಳ್ಳಿಯ ಸವಿತಾ (28), ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಈಕೆಯ ದೊಡ್ಡಪ್ಪನ ಮಗ ಅನಿಲ್ (29), ಕೃಷ್ಣನಗರದ ಬಸವ (22), ರವಿ (25), ಪ್ರಸನ್ನ (20), ಕೋರಮಂಗಲದ ಮನೋಜ್ (23), ಕೊಳಂದ ವಸು (20), ಮುರುಗ (19), ಸುಬ್ರಮಣಿ (20), ಬಸವಪುರದ ಮುರಳಿ (29), ವಿವೇಕ್‌ನಗರದ ಕಿಶನ್‌ಕುಮಾರ್ (20), ಕೈಕೊಂದ್ರಹಳ್ಳಿಯ ಸುನಿಲ್ (23), ಕಸವನಹಳ್ಳಿಯ ಶಂಕರ್ (24) ಎಂಬವರೇ ಬಂಧಿತ ಆರೋಪಿಗಳಾಗಿದ್ದು, ಸೀನ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಸವಿತಾರ ಗಂಡ, ಬಾಷ್‌ ಕಂಪನಿಯ ನೌಕರ ರಮೇಶ್ ಎಂಬಾತ ಕೆ.ಆರ್. ಪುರಂ ಯರಯ್ಯನಪಾಳ್ಯದ ಕುಂಬಾರ ಬೀದಿಯಲ್ಲಿ ವನೀಸ್‌ ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದ ನಿರ್ಮಲಾ (42) ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದರಿಂದ ಕೆರಳಿದ ಸವಿತಾ, ನಿರ್ಮಲಾರನ್ನು ಕೊಲೆಮಾಡಲು ತನ್ನ ಸೋದರ ಸಂಬಂಧಿ ಅನಿಲನಿಗೆ ನಾಲ್ಕು ಲಕ್ಷ ರೂ. ಸುಪಾರಿ ನೀಡಿದ್ದರು ಎನ್ನಲಾಗಿದೆ. ಅನಿಲ ಕೊಲೆ ಆರೋಪಿಗಳಿಗೆ ಎರಡೂವರೆ ಲಕ್ಷ ರೂ. ಸುಪಾರಿ ನೀಡಿದ್ದ.

ಹತ್ಯೆ ಮಾಡಿದ್ದು ಹೀಗೆ: ಆರೋಪಿ ಅನಿಲ್‌ ಕುಮಾರ್‌ ಸುಪಾರಿ ಹಂತಕರೊಂದಿಗೆ ಫೆ. 27 ರಂದು ಮಧ್ಯಾಹ್ನ 2 ಗಂಟೆಗೆ ಶ್ರೀನಿವಾಸರೆಡ್ಡಿ ಲೇಔಟ್‌ನಲ್ಲಿರುವ ಮನೆಗೆ ನುಗ್ಗಿ ನಿರ್ಮಲಾಳ ತಲೆಗೆ ರಾಡ್‌ ಮತ್ತು ದೊಣ್ಣೆಯಿಂದ ಹೊಡೆದು ಹತ್ಯೆಗೈದು ಪರಾರಿಯಾಗಿದ್ದ. ನಿರ್ಮಲಾಳ ಕೊಲೆಯಾಗಿ ಒಂದು ವಾರದ ತನಕ ರಮೇಶ್‌ನಿಗೆ ಯಾವುದೇ ಮಾಹಿತಿ ಇರಲಿಲ್ಲ. ನಿರ್ಮಲಾ ಮತ್ತು ರಮೇಶ್‌ಗೆ ಸಂಬಂಧ ಇರುವ ಮಾಹಿತಿ ಕಲೆಹಾಕಿ ವಿಚಾರಣೆ ನಡೆಸಿದಾಗ ಆರೋಪಿ ಸವಿತಾ ಸುಪಾರಿ ನೀಡಿ ಹತ್ಯೆ ಮಾಡಿಸಿರುವುದು ಬೆಳಕಿಗೆ ಬಂದಿದೆ.

ಪೂರ್ವ ವಿಭಾಗ ಡಿಸಿಪಿ ಚಂದ್ರಶೇಖರ್‌ ಮಾರ್ಗದರ್ಶನದಲ್ಲಿ ಕೆ.ಆರ್‌.ಪುರಂ ಉಪವಿಭಾಗದ ಎಸಿಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ರಾಮಮೂರ್ತಿನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಕೆ.ವಿ.ಶ್ರೀನಿವಾಸ್‌ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

English summary
Bangalore Ramamurthy Nagar police arrested Savitha, 37, a homemaker, for allegedly giving supari to 13 assailants who killed her husband's lover, Nirmala, 42, a beautician on February 27, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X