ಪ್ರಶ್ನೆ ಪತ್ರಿಕೆ ಲೀಕ್, ಸಿಐಡಿ ತನಿಖೆಗೆ ಆದೇಶ

ಪಿಯು ಮಂಡಳಿ ಸಭೆ ತೆಗೆದುಕೊಂಡ ನಿರ್ಣಯಗಳನ್ನು ಫೋನ್ ಮೂಲಕ ತಿಳಿದುಕೊಂಡ ಶಿರಸಿಯಲ್ಲಿರುವ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದ್ದಾರೆ. ಸಿಐಡಿ ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವ ಕಾಗೇರಿ ಹೇಳಿದ್ದಾರೆ.
ಇದಕ್ಕೂ ಮುನ್ನ ಪಿಯು ಮಂಡಳಿ ಸಭೆ ನಂತರ ಕೋಲಾರ ಹಾಗೂ ಚಿಕ್ಕಬಳ್ಳಾಪುರದ ನಾಲ್ಕು ಖಾಸಗಿ ಕಾಲೇಜಿನ ಮಾನ್ಯತೆ ರದ್ದು ಪಡಿಸಲು ನಿರ್ಧರಿಸಲಾಗಿದೆ. ಸುಮಾರು 14 ಉಪನ್ಯಾಸಕರನ್ನು ಅಮಾನತುಗೊಳಿಸಿ ಸೂಕ್ತ ತನಿಖೆಗೆ ಆಗ್ರಹಿಸಲಾಗಿದೆ.
ಪ್ರಶ್ನೆ ಪತ್ರಿಕೆ ಲೀಕ್ ಆದ ಬಗ್ಗೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆದಿದೆ ಎಂದು ಪಿಯು ಮಂಡಳಿ ಜಂಟಿ ನಿರ್ದೇಶಕಿ ದಾಕ್ಷಾಯಿಣಿ ಅವರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ವಿಜ್ಞಾನ ಪರೀಕ್ಷೆ ಮುಂದೂಡಲಾಗಿದೆ. ಇನ್ನೂ ದಿನಾಂಕ ನಿಗದಿಪಡಿಸಿಲ್ಲ ಎಂದು ಪದವಿ ಪೂರ್ವ ಪರೀಕ್ಷಾ ಮಂಡಳಿ(KBPUE) ಆಯುಕ್ತೆ ರಶ್ಮಿ ವಿ ಮಹೇಶ್ ಹೇಳಿದ್ದಾರೆ.
ಮಾ.15 ರಿಂದ 30ರ ವರೆಗೆ ಪಿಯೂ ಪರೀಕ್ಷೆ ನಡೆಯುತ್ತಿದೆ. ರಾಜ್ಯದ ಒಟ್ಟು 923 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 5,96,739 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.[ವೇಳಾಪಟ್ಟಿ ನೋಡಿ]
ವಿದ್ಯಾರ್ಥಿಗಳ ಪ್ರತಿಭಟನೆ: ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ ನಂತರ ನೂರಾರು ವಿದ್ಯಾರ್ಥಿಗಳು, ಪೋಷಕರು ಪಿಯು ಮಂಡಳಿ ಕಟ್ಟಡದ ಎದುರು ಜಮಾಗೊಂಡಿದ್ದು, ಪ್ರತಿಭಟನೆ ನಡೆಸಿದ್ದಾರೆ. ಎಬಿವಿಪಿ ಮುಂತಾದ ಸಂಘಟನೆಗಳು ವಿದ್ಯಾರ್ಥಿಗಳಿಗೆ ಸಾಥ್ ನೀಡಿದ್ದಾರೆ.












Click it and Unblock the Notifications