ಕನ್ನಡ ಬಾವುಟ ಹಾರಿಸುವುದು ಕಡ್ಡಾಯ : ಗೌಡ

ಪ್ರತಿ ನವೆಂಬರ್ 1, ಕನ್ನಡ ರಾಜ್ಯೋತ್ಸವದಂದು ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳ ಮೇಲೆ ಹಳದಿ-ಕೆಂಪು ಬಣ್ಣದ ಕನ್ನಡ ಬಾವುಟವನ್ನು ಕಡ್ಡಾಯವಾಗಿ ಹಾರಿಸಬೇಕೆಂದು ಸದಾನಂದ ಗೌಡರು ಆಜ್ಞೆ ಹೊರಡಿಸಿದ್ದಾರೆ. ಸರಕಾರಿ ಕಚೇರಿ ಮಾತ್ರವಲ್ಲ ಇಲ್ಲಿರುವ ಎಲ್ಲ ಖಾಸಗಿ ಕಚೇರಿಗಳ ಮೇಲೆಯೂ ಕನ್ನಡ ಬಾವುಟ ಹಾರಿಸುವುದು ಕಡ್ಡಾಯ ಮಾಡಿದ್ದರೆ ಇನ್ನೂ ಚೆಂದಾಗಿರುತ್ತಿತ್ತು.
ಇದಲ್ಲದೆ, ಕನ್ನಡ ನಾಡಿನಲ್ಲಿ ಕನ್ನಡಮಯ ವಾತಾವರಣವನ್ನು ಸೃಷ್ಟಿಸುವ ಮತ್ತು ಚಟುವಟಿಕೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಅನೇಕ ಅನುದಾನಗಳನ್ನು ಸದಾನಂದ ಗೌಡರು ಹರಿಯಬಿಟ್ಟಿದ್ದಾರೆ. ಅವುಗಳಲ್ಲಿ ಪ್ರಮುಖವಾದುದೆಂದರೆ, ಕನ್ನಡ ಮತ್ತು ಸಂಸ್ಕೃತಿಗೆ ಸಂಬಂಧಿತ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 269 ಕೋಟಿ ರು. ಅನುದಾನ ನೀಡಲಾಗಿದೆ.
ಕರ್ನಾಟಕದ ಹೆಮ್ಮೆಯ ಮೈಸೂರು ಅರಮನೆ 100 ವರ್ಷ ಪೂರೈಸಿರುವ ಸಂದರ್ಭದಲ್ಲಿ ಅಲ್ಲಿನ ವಾಸ್ತುಶಿಲ್ಪವನ್ನು ನವೀಕರಿಸುವ ಮತ್ತು ಉದ್ಯಾನವನವನ್ನು ಉನ್ನತ ದರ್ಜೆಗೆ ಏರಿಸಿ, ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ಉದ್ದೇಶದಿಂದ 25 ಕೋಟಿ ರು. ಅನುದಾನ ನೀಡಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರು. ಅನುದಾನ ಬಜೆಟ್ಟಿನಲ್ಲಿ ನೀಡಲಾಗಿದೆ.
ಹಾಗೆಯೆ, ಕರ್ನಾಟಕದ ಕರಾವಳಿಯ ಅತ್ಯಂತ ಜನಪ್ರಿಯ ಕ್ರೀಡೆ ಕಂಬಳವನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ, ಆ ಆಚರಣೆಯನ್ನು ಸಾಂಸ್ಕೃತಿಕ ಕಾರ್ಯಕ್ರಮವಾಗಿ ದಾಖಲಿಸಲು ನಿರ್ಧರಿಸಲಾಗಿದ್ದು, ಆಚರಣೆಗಾಗಿ 1 ಕೋಟಿ ರು. ಮೊತ್ತವನ್ನು ಸದಾನಂದ ಗೌಡರು ಬಜೆಟ್ಟಿನಲ್ಲಿ ಒದಗಿಸಿದ್ದಾರೆ.











Click it and Unblock the Notifications