Decrypt ಮಾಡಲಾಗದ ಪ್ರಿನ್ಸಿ-ಪಾಲ್ ಲ್ಯಾಪ್ಟಾಪ್ ರಹಸ್ಯ

ವಿಚಾರಣೆ ಸಂದರ್ಭದಲ್ಲಿ ಕ್ಷಣ ಕ್ಷಣಕ್ಕೂ ವಿಚಿತ್ರ ಹೇಳಿಕೆ ಕೊಡುತ್ತಿರುವ ಪಾಲ್ ಈಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ. ಹ್ಯಾರಿ ಪಾಟರ್ ಖ್ಯಾತಿಯ ಡೆನಿಯಲ್ ರಾಡ್ ಕ್ಲಿಫ್ ಗೆ ನಾನು ಪಾಠ ಮಾಡಿದ್ದೆ ಎಂದು ಪಾಲ್ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಫೆ.1 ರಂದು ಪೊಲೀಸ್ ವಶಕ್ಕೆ ಮೀಕಿನ್ ಲ್ಯಾಪ್ ಟಾಪ್ ಟಾಪ್ ಸಿಕ್ಕಿತ್ತು. ಆದರೆ, ಎಲ್ಲಾ ಫೈಲ್ ಗಳು ಗುಪ್ತ ಸಂಖ್ಯೆಗಳಿಂದ ಸಂರಕ್ಷಿಸಲ್ಪಟ್ಟಿತ್ತು. ಪಾಲ್ ನನ್ನು ಈ ಬಗ್ಗೆ ಕೇಳಿದರೆ ಇಲ್ಲಾ ಅದೆಲ್ಲವೂ encrypt ಆಗಿದೆ ನನಗೆ ಅದನ್ನು decrypt ಮಾಡಲು ಬರುವುದಿಲ್ಲ. ನೀವೇ ಓಪನ್ ಮಾಡಿಕೊಳ್ಳಿ ಎಂದಿದ್ದಾನೆ.
ಲಂಡನ್ ಹಾಗೂ ಥೈಲ್ಯಾಂಡ್ ನ ಪೊಲೀಸರಿಗೂ ಪಾಲ್ ಬೇಕಾಗಿದ್ದು, ಆತನ ಬಳಿ ಹಲವು ಪ್ರಮುಖ ದಾಖಲೆಗಳು ಇರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನ ಗಣಕ ತಜ್ಞರು ಮಿಕೀನ್ ಲ್ಯಾಪ್ ಟಾಪ್ ರಹಸ್ಯ ಬಿಡಿಸಲು ಸಾಧ್ಯವಾಗದೆ ಕೈ ಚೆಲ್ಲಿದ್ದಾರೆ. ಈಗ ಲ್ಯಾಪ್ ಟಾಪ್ ಹೈದರಾಬಾದಿನ ಕೇಂದ್ರ ಫೋರೆನ್ಸಿಕ್ ಲ್ಯಾಬ್ ಸೇರಿದೆ. ಐಟಿ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರಲ್ಲಿ ಒಂದು ಲ್ಯಾಪ್ ಟಾಪ್ ರಹಸ್ಯ ಹೊರತೆಗೆಯಲು ಆಗದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಶಿಶುಪೀಡನೆ, ಅಸಭ್ಯ ವರ್ತನೆ, ಅಶ್ಲೀಲ ಸಂದೇಶ ರವಾನೆ ಆರೋಪದ ಮೇಲೆ ಜ.23 ರಂದು ಪಾಲ್ ನನ್ನು ಬಂಧಿಸಲಾಗಿತ್ತು. ಆದರೆ, ಜಾಮೀನು ಪಡೆದು ಪಾಲ್ ಹೊರಬಿದ್ದಿದ್ದ. ಆದರೆ, ನಂತರ ಇಂಟರ್ ಪೋಲ್ ನೆರವು ಪಡೆದು ಮತ್ತೆ ಬಂಧಿಸಲಾಗಿದೆ. ನಕಲಿ ಪಾಸ್ ಪೋರ್ಟ್ ಬಳಕೆ ಆರೋಪ ಕೂಡಾ ಪಾಲ್ ಎದುರಿಸುತ್ತಿದ್ದು ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲಿದ್ದಾನೆ.
ಹೈದರಾಬಾದಿನಿಂದ ಲ್ಯಾಪ್ ಟಾಪ್ ಪರೀಕ್ಷೆ ವರದಿ ಹೊರಬರಲು ಮೂರು ತಿಂಗಳಾದರೂ ಬೇಕು ಎನ್ನಲಾಗಿದ್ದು, ಪ್ರಕರಣದ ತನಿಖೆ ವಿಳಂಬವಾಗುತ್ತಿದೆ.












Click it and Unblock the Notifications