ರಾಜ್ಯದಲ್ಲೂ 'ಗುಜರಾತ್ ಮಾದರಿ ಲೋಕ' ಜಾರಿಯಾಗುವುದೇ!

ಈ ಪ್ರಶ್ನೆ ಬಾಲಿಶ ಎನಿಸಿದರೂ ಆರು ತಿಂಗಳಿಂದ ರಾಜ್ಯದಲ್ಲಿ ಲೋಕಾಯುಕ್ತ ಪೀಠದ ಮೇಲೆ ಕಾಂಗ್ರೆಸ್ ಹುಲ್ಲು (ಬಿಜೆಪಿ ಹುಲ್ಲು?) ಬೆಳೆಯುತ್ತಿರುವುದನ್ನು ನೋಡಿದರೆ ಯಾರಿಗೇ ಆಗಲಿ ಈ ಪ್ರಶ್ನೆ ಕೇಳಬೇಕೆನಿಸುತ್ತದೆ. ಕರ್ನಾಟಕದಲ್ಲೂ ರಾಜ್ಯಪಾಲ ಭಾರದ್ವಾಜ್ ಅವರು ನೇರವಾಗಿ 'ಅಕಳಂಕಿತ' ಲೋಕಾಯುಕ್ತರನ್ನು ನೇಮಕ ಮಾಡಬಾರದೇ ಎಂದು ಜನ ಕೇಳುತ್ತಿದ್ದಾರೆ.
ಹೈಕೋರ್ಟಿನ ತೀರ್ಪನ್ನು ಆಧರಿಸಿ ನ್ಯಾ. ಮೆಹ್ತಾ ಯಾವಾಗ ಬೇಕಾದರೂ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಬಹುದೆಂದು ಕಾನೂನು ತಜ್ಞರು ಹೇಳುತ್ತಿದ್ದಾರೆ. ಸುಮಾರು ಏಳೆಂಟು ವರ್ಷಗಳಿಂದ ಖಾಲಿ ಬಿದ್ದಿದ್ದ ಲೋಕಾಯುಕ್ತ ಪೀಠಕ್ಕೆ ಯಾರೋ ಒಬ್ಬರು ಏರಿದಂತಾಯಿತಲ್ಲ ಎಂದು ಗುಜರಾತ್ ಮಂದಿ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.
ಆದರೆ, ಆ ಸೌಭಾಗ್ಯ ನಮಗೂ ಇಲ್ಲವೇ ಎಂದು ಕರ್ನಾಟಕದ ಮಂದಿ ಕೇಳುವುದಕ್ಕೂ ಮುನ್ನವೇ ರಾಜ್ಯಪಾಲ ಭಾರದ್ವಾಜ್ ಅವರು 'ಇಲ್ಲ ಇಲ್ಲ. ಅದೆಲ್ಲ ಆಗಿಬರಾಕಿಲ್ಲ. ಕಾನೂನಿನಲ್ಲಿ ನನಗೆ ಅಂಥಾ ಅವಕಾಶ ಇಲ್ಲ. ಈಗಲೂ ಅಷ್ಟೇ ನ್ಯಾ. ಬನ್ನೂರುಮಠ ಅವರನ್ನು ಹೊರತುಪಡಿಸಿ ಬೇರೆ ಯಾರನ್ನಾದರೂ ಸೂಚಿಸಲಿ ಕಣ್ಮುಚ್ಚಿಕೊಂಡು ಒಪ್ಪಿಗೆಯ ಮುದ್ರೆ ಒತ್ತುತ್ತೇನೆ' ಎಂದು ಹೇಳಿದ್ದಾರೆ.
ನ್ಯಾ. ಸಂತೋಷ್ ಹೆಗ್ಡೆ ಏನನ್ನುತ್ತಾರೆ?: ಆದರೆ ನಮ್ಮ ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಶ್ರೀರಂಗಪಟ್ಟಣದಲ್ಲಿ ಮಾತನಾಡುತ್ತಾ 'ಲೋಕಾಯುಕ್ತರ ನೇಮಕ ವಿಚಾರದಲ್ಲಿ ಸರ್ಕಾರದ ತೀರ್ಮಾನಕ್ಕೆ ಕಾಯದೇ ಗುಜರಾತ್ ಮಾದರಿಯಲ್ಲಿ ರಾಜ್ಯಪಾಲರೇ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡುವುದು ಸೂಕ್ತ' ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್‌ನಲ್ಲಿ ಹಲವು ವರ್ಷಗಳಿಂದ ಲೋಕಾಯುಕ್ತರನ್ನು ನೇಮಕ ಮಾಡಿರಲಿಲ್ಲ. ಸರ್ಕಾರದ ಈ ಕ್ರಮದ ವಿರುದ್ಧ ಅಲ್ಲಿನ ರಾಜ್ಯಪಾಲರು ಖಾಲಿ ಉಳಿದಿದ್ದ ಲೋಕಾಯುಕ್ತ ಹುದ್ದೆಗೆ ಅರ್ಹ ವ್ಯಕ್ತಿ ನೇಮಿಸಿದರು. ರಾಜ್ಯಪಾಲರ ಈ ಕ್ರಮವನ್ನು ಅಲ್ಲಿನ ಹೈಕೋರ್ಟ್ ಕೂಡ ಎತ್ತಿಹಿಡಿದಿದೆ.
ಅದೇ ರೀತಿ ಕರ್ನಾಟಕದ ರಾಜ್ಯಪಾಲರು ಕಾನೂನನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿ ಲೋಕಾಯುಕ್ತರನ್ನು ನೇಮಕ ಮಾಡುವ ಅಧಿಕಾರ ತಮಗಿದ್ದಲ್ಲಿ ಆ ಹುದ್ದೆಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದು ಒಳ್ಳೆಯದು ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದ್ದಾರೆ.












Click it and Unblock the Notifications