ಆಸ್ಪತ್ರೆಯಲ್ಲಿರುವ ಡಿಕೆಶಿಗೆ ಕೃಷ್ಣ ಬೋಧಿಸಿದ್ದೇನು?

ಒಂದು ಕಾಲದಲ್ಲಿ ಎಸ್ಎಂ ಕೃಷ್ಣ ಅವರ blue-eyed boy ಎಂದೇ ಗುರುತಿಸಲ್ಪಟ್ಟಿದ್ದ ಡಿಕೆ ಶಿವಕುಮಾರ್ ಮತ್ತು ಅವರ ರಾಜಕೀಯ ಗುರು ಎಸ್ಎಂ ಕೃಷ್ಣ ಅವರ ಸಂಬಂಧ ಇತ್ತೀಚೆಗೆ ಅಷ್ಟಕ್ಕಷ್ಟೇ ಎನ್ನಲಾಗಿತ್ತು. ಆದರೆ ಬದಲಾದ ರಾಜಕೀಯ ಕಾಲಮಾನದಲ್ಲಿ ಡಿಕೆಶಿ ಅವರ ಅನಾರೋಗ್ಯವನ್ನೇ ನೆಪವಾಗಿಸಿಕೊಂಡು ಕೃಷ್ಣ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಹಲವು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಥೈರಾಯ್ಡ್ ಶಸ್ತ್ರಚಿಕಿತ್ಸೆಗೊಳಗಾಗಿ, ವಿಶ್ರಾಂತಿಯಲ್ಲಿರುವ ಶಿವಕುಮಾರ್ ಅವರನ್ನು ಕೃಷ್ಣ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.
ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಆಂತರಿಕ ಬಂಡಾಯ ಲಾಭ ಪಡೆಯಲು ಹಾಗೂ ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡಲು ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿರುವ ಬೆನ್ನಲ್ಲೇ ಎಸ್‌ಎಂ ಕೃಷ್ಣ ಅವರ ಬೆಂಗಳೂರು ಭೇಟಿ ಹಲವು ಕುತೂಹಲಗಳನ್ನು ಸೃಷ್ಟಿಸಿದೆ.
ಕೇವಲ ಪಕ್ಷದ ವಿದ್ಯಮಾನಗಳು ಮಾತ್ರವಲ್ಲದೆ, ಲೋಕಾಯುಕ್ತ ಕೋರ್ಟ್‌ನಲ್ಲಿ ನಡೆಯುತ್ತಿರುವ (ಡಿನೋಟಿಫಿಕೇಷನ್) ಪ್ರಕರಣದ ಕುರಿತು ಕೂಡ ಮುಂದೆ ತೆಗೆದುಕೊಳ್ಳಬೇಕಾದ ನಿಲುವಿನ ಬಗ್ಗೆ ಡಿಕೆ ಶಿವಕುಮಾರ್ ಜತೆ ಎಸ್ಎಂ ಕೃಷ್ಣ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ರಾಜಕೀಯದ ಬಗ್ಗೆ ಆಮೂಲಾಗ್ರ ಅನುಭವವಿರುವ ಎಸ್‌ಎಂ ಕೃಷ್ಣ ಅವರು ನೀಡುವ ಸಲಹೆಯನ್ನು ಹೈಕಮಾಂಡ್ ಬಯಸಿದೆ. ಕಾಂಗ್ರೆಸ್ ಕೆಲ ಶಾಸಕರು ಪಕ್ಷ ತೊರೆಯುವ ಸೂಚನೆ ನೀಡುತ್ತಿರುವುದರಿಂದ ಅವರನ್ನು ನಿಭಾಯಿಸಲು ಎಸ್‌ಎಂ ಕೃಷ್ಣ ಅವರಂತಹ ಸಮರ್ಥ ನಾಯಕರೇ ಬೇಕಾಗಿದ್ದಾರೆ ಎಂದು ಮುಖಂಡರು, ಪಕ್ಷದ ಹೈಕಮಾಂಡ್ ಗಮನಕ್ಕೆ ತಂದಿದ್ದರು ಎಂದೂ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ತಮ್ಮ ಆಪ್ತ ಬಳಗದ ಜತೆ ಕೃಷ್ಣ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications