ನಮ್ಮ ಮೆಟ್ರೋಗೆ ಚಿಯರ್ಸ್ ಹೇಳಲು ಪೊಲೀಸ್ ನಕಾರ

ಯಾರನ್ನು ಕೇಳಿ ರಾತ್ರಿ 2ರವರೆಗೆ ರೈಲು ಓಡಿಸುವುದಾಗಿ ಪ್ರಕಟಿಸಿದ್ದೀರಿ ಎಂದು ಪೊಲೀಸರು ತಗಾದೆ ತೆಗೆದಿದ್ದಾರೆ. ರಾತ್ರಿ 11ರವರೆಗೆ ಮಾತ್ರ ನಮ್ಮ ಮೆಟ್ರೋಗೆ ಭದ್ರತೆ ಒದಗಿಸಲಾಗುವುದು. ನಂತರ ನೀವುಂಟು ನಿಮ್ಮ ರೈಲುಂಟು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಟಿ. ಸುನೀಲ್ ಕುಮಾರ್ ಹೇಳಿದ್ದಾರೆ.
ಮಧ್ಯರಾತ್ರಿಯ ನಂತರವೂ ನಗರದಲ್ಲಿ ಪಾರ್ಟಿಗಳು ನಡೆಯುತ್ತಿರುವುದರಿಂದ ಜನರಿಗೆ ಅನುಕೂಲವಾಗಲೆಂದು ನಮ್ಮ ಮೆಟ್ರೋ ರಾತ್ರಿ 2ರವರೆಗೆ ರೈಲು ಓಡಿಸಲು ದೊಡ್ಡ ಮನಸ್ಸು ಮಾಡಿತ್ತು. ಆದರೆ, ಈ ಒಂದು ಬದಿಯ ನಿರ್ಧಾರ ಪೊಲೀಸರ ನಿದ್ದೆ ಕೆಡಿಸಿದೆ.
ನಮ್ಮ ಮೆಟ್ರೋ ಬಯ್ಯಪ್ಪನಹಳ್ಳಿಯಿಂದ ಎಂಜಿ ರಸ್ತೆಯವರೆಗೆ ಚಲಿಸುತ್ತಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಕುಡಿದು ಮಸ್ತಿ ಮಾಡಿ ಮನೆಗೆ ತೆರಳುವ ಜನ ನಮ್ಮ ಮೆಟ್ರೋ ರೈಲಿನಲ್ಲಿ ದಾಂಧಲೆ ಎಬ್ಬಿಸಬಹುದು. ಕುಡಿದು ಬರುವವರಿಗೆ ಮೆಟ್ರೋದಲ್ಲಿ ಚಲಿಸಲು ಅವಕಾಶವಿಲ್ಲ, ಅಂಥವರು ಗಲಾಟೆ ಮಾಡಬಹುದು ಎಂಬುದು ಪೊಲೀಸರ ಕಾಳಜಿಗೆ ಕಾರಣ.
ಹದಿನಾರು ಸಾವಿರ ಪೊಲೀಸರು : ಡಿ.31ರಂದು ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ನಗರದ ಇಡೀ ಪೊಲೀಸ್ ವ್ಯವಸ್ಥೆ, ಸಂಚಾರಿ ಪೊಲೀಸರು, ಹೋಮ್ ಗಾರ್ಡ್ ಗಳು ಸೇರಿದಂತೆ 16 ಸಾವಿರ ಪೊಲೀಸರು ಕರ್ತವ್ಯದ ಮೇಲಿರಲಿದ್ದಾರೆ. ಜೊತೆಗೆ ಕರ್ನಾಟಕ ರಾಜ್ಯ ಮೀಸಲು ಪೊಲೀಸರ 20 ತುಕುಡಿ ಮತ್ತು ಸಶಸ್ತ್ರ ಪೊಲೀಸರ 15 ತುಕುಡಿಗಳು ನಗರವನ್ನು ಕಾಯಲಿದ್ದಾರೆ.
ರಾತ್ರಿ 3ರವರೆಗೆ ಬಿಎಂಟಿಸಿ ಬಸ್ ಸಂಚಾರ : ಮಧ್ಯ ರಾತ್ರಿ ನಮ್ಮ ಮೆಟ್ರೋ ಓಡದಿದ್ದರೂ ಬಿಎಂಟಿಸಿ ಬಸ್ಸುಗಳು ಬೆಳಗಿನ ಜಾವ 3ರವರೆಗೆ ನಗರದಲ್ಲಿ ಸಂಚರಿಸಲಿವೆ. ಒಟ್ಟಾರೆ 120 ಬಸ್ಸುಗಳು ಪ್ರಯಾಣಿಕರು ತಲುಪಬೇಕಾದ ಸ್ಥಳಗಳನ್ನು ತಲುಪಿಸಲಿವೆ. ಆದರೆ, ಜನರು ತಮ್ಮ ಎಚ್ಚರಿಕೆಯಲ್ಲಿ ತಾವು ಇರಬೇಕೆಂದು ಪೊಲೀಸರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications