ಬೆಳಗಾವಿ ಪಾಲಿಕೆಗೆ ಎಂಇಎಸ್ ಸದಸ್ಯರ ರಾಜೀನಾಮೆ

ಡಾ. ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅವರಿಗೆ ಗೌರವ ನೀಡಬೇಕೆಂಬ ಪ್ರಸ್ತಾವನೆಯನ್ನು ತೀವ್ರವಾಗಿ ವಿರೋಧಿಸಿದ್ದ ಬೆಳಗಾವಿ ಮಾಜಿ ಮೇಯರ್ ಸಂಭಾಜಿ ಪಾಟೀಲ್ ಮತ್ತೊಬ್ಬರು ಸದಸ್ಯತ್ವಕ್ಕೆ ಗುರುವಾರ, ಡಿ.1ರಂದು ರಾಜೀನಾಮೆ ನೀಡಿದ್ದಾರೆ.
ಸದ್ಯಕ್ಕೆ ಇಬ್ಬರು ರಾಜೀನಾಮೆ ನೀಡಿದ್ದು, ನಂತರ ಸಾಮೂಹಿಕ ರಾಜೀನಾಮೆ ನೀಡುವ ಕುರಿತು ಎಲ್ಲ ಚರ್ಚಿಸಿ ನಿರ್ಧಾರಕ್ಕೆ ಬರುವುದಾಗಿ ಮೇಯರ್ ಮಂದಾ ಬಾಳೆಕುಂದ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಪ್ರತಿಕ್ರಿಯೆಯ ಹೊರತಾಗಿ ಎಂಇಎಸ್ ನಿಂದ ಸರಕಾರಕ್ಕೆ ಯಾವ ಉತ್ತರವೂ ಬಂದಿಲ್ಲ.
ಇದು ಮಹಾರಾಷ್ಟ್ರ ಏಕೀಕರಣ ಸಮಿತಿ ಕರ್ನಾಟಕ ಸರಕಾರದೆಡೆಗಿನ ತನ್ನ ಅಸಡ್ಡೆಯನ್ನು ಈ ರೀತಿಯಲ್ಲಿ ಮತ್ತೆ ಪ್ರದರ್ಶಿಸಿದೆ. ನೋಟೀಸ್ ಕಳಿಸಿದರೂ ಯಾವುದೇ ಸೂಕ್ತ ಉತ್ತರ ನೀಡದೆ ದಾರ್ಷ್ಟ್ಯವನ್ನು ತೋರಿದೆ. ಈಗ ಕ್ರಮ ತೆಗೆದುಕೊಳ್ಳಬೇಕಾದ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ.
ಸಂಭಾಜಿ ಪಾಟೀಲ್, ಮೇಯರ್ ಮಂದಾ ಬಾಳೆಕುಂದ್ರಿ ಮತ್ತು ಉಪ ಮೇಯರ್ ರೇಣು ಕಿಲ್ಲೇಕರ್ ಅವರಂಥ ನಾಡದ್ರೋಹಿಗಳನ್ನು ಬಂಧಿಸಿ, ಬೆಳಗಾವಿ ಮಹಾನಗರ ಪಾಲಿಕೆಯನ್ನು ವಿಸರ್ಜಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸರಕಾರವನ್ನು ಆಗ್ರಹಿಸುತ್ತಲೇ ಇದೆ. ಈ ನಡುವೆ, ಠಾಕ್ರೆಯನ್ನು ಭೇಟಿಯಾಗುವುದಾಗಿ ಸದಾನಂದ ಗೌಡರು ಹೇಳಿದ್ದು ಕನ್ನಡಿಗರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications