ಅಶೋಕ್ ಭೂ ಹಗರಣ: ಸೋಮವಾರ ತನಿಖೆ ಆರಂಭ

ಹೀಗಾಗಿ, ಅಶೋಕ ಮಹಾರಾಜರ ವಿರುದ್ಧ ಲೋಕಾಯುಕ್ತ ಪೊಲೀಸರು ಈಗಾಗಲೇ ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖಾಧಿಕಾರಿಯನ್ನಾಗಿ ಲೋಕಾಯುಕ್ತ ಡಿವೈಎಸ್ಪಿ ಅಬ್ದುಲ್ ಅಹಮದ್‌ರನ್ನು ನೇಮಕ ಮಾಡಲಾಗಿದೆ. ಅಶೋಕ್ ಸೋಮವಾರದಿಂದ ತನಿಖೆಗೆ ಒಳಪಡಲಿದ್ದಾರೆ.
ಸಚಿವ ಆರ್. ಅಶೋಕ್ ಭೂ ಹಗರಣದ ಸಂಬಂಧ ತನಿಖೆ ನಡೆಸುವಂತೆ ಲೋಕಾಯುಕ್ತ ಕೋರ್ಟ್ ಆದೇಶಿಸಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಪಿ.ಕೆ. ಶಿವಶಂಕರ್ ಅವರು ಡಿವೈಎಸ್ಪಿ ಅಬ್ದುಲ್ ಅಹಮದ್‌ರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಿ ಅಶೋಕ್ ವಿರುದ್ಧ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಬಿಡಿಎ ವಶಪಡಿಸಿಕೊಂಡಿದ್ದ ಭೂಮಿಯನ್ನು ಕಾನೂನು ಬಾಹಿರವಾಗಿ ಖರೀದಿಸಿ, ಬಳಿಕ ಡಿನೋಟಿಫಿಕೇಷನ್ ಮಾಡಿಸುವ ಮೂಲಕ ಸಚಿವ ಆರ್.ಅಶೋಕ್ ಸರಕಾರದ ಖಜಾನೆಗೆ 50 ಕೋಟಿಗಿಂತ ಹೆಚ್ಚು ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ, ಪತ್ರಕರ್ತ ಜಯಕುಮಾರ್ ಹಿರೇಮಠ್ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಅ.19ರಂದು ಖಾಸಗಿ ಮೊಕದ್ದಮೆಯನ್ನು ದಾಖಲಿಸಿದ್ದರು.
ದೂರನ್ನು ವಿಚಾರಣೆಗೆ ಅಂಗೀಕರಿಸಿದ ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾ.ಎನ್.ಕೆ. ಸುಧೀಂದ್ರ ರಾವ್ ಅವರು, ಸಚಿವ ಅಶೋಕ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಅ. 20ರಂದು ಆದೇಶಿಸಿದ್ದರು. ಪ್ರಕರಣದಲ್ಲಿ ಆರ್. ಅಶೋಕ್, ಮಾಜಿ ಸಿಎಂ ಯಡಿಯೂರಪ್ಪ, ಭೂ ಮಾಲೀಕ ಶಾಮಣ್ಣ ಮತ್ತು ರಾಮಸ್ವಾಮಿ ಆರೋಪಿಗಳಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಭೂ ವರ್ಗಾವಣೆ ಕಾಯ್ದೆ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್ ಪಿಸಿ) ಕಲಂ 156(3) ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 403, 407, 408, 409 ಮತ್ತು 420ರಡಿ ಲೋಕಾಯುಕ್ತ ಪೊಲೀಸರು ಸಚಿವ ಆರ್. ಅಶೋಕ್ ವಿರುದ್ಧ ಅ. 21ರಂದು ಎಫ್‌ಐಆರ್ ದಾಖಲಿಸಿದ್ದಾರೆ.












Click it and Unblock the Notifications