ಕೋರ್ಟ್ ಭೀತಿ: ಜೈಲಿನತ್ತ ಓಡಿದ ವಿಚಾರಣಾ ಕೈದಿ 10462

ಲೋಕಾಯುಕ್ತ ಕೋರ್ಟ್ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಅವರು ಶನಿವಾರ ಸಂಜೆ ಸನ್ಮಾನ್ಯ ಯಡಿಯೂರಪ್ಪ ಅವರನ್ನು ಜೈಲಿಗೆ ಗದುಮಿದ ಬಳಿಕ ಏನೆಲ್ಲ ನಾಟಕಗಳು ನಡೆಯುತ್ತಿವೆ ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡುತ್ತಿದ್ದರು. ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಒಂದು ಅರೆಗಳಿಗೆಯೂ ಕಾಲ ಕಳೆಯದೆ ಸೀದಾ ಆಸ್ಪತ್ರೆ ಪಾಲಾದ ಯಡಿಯೂರಪ್ಪನವರ ಮಹಾ ನಾಟಕವನ್ನು ನ್ಯಾ. ನಂಗಲಿ ಸುಧೀಂದ್ರ ಕಣ್ಣಿಂಚಿನಲ್ಲೇ ಗಮನಿಸುತ್ತಿದ್ದರು.
ಅಪರಾಧಿಗಳನ್ನು ಎನ್ ಕೌಂಟರ್ ಮಾಡುವ ಮುನ್ನ ಪೊಲೀಸರು ಅನೇಕ ವೇಳೆ ತಮ್ಮ ಬಂಧನದಿಂದ ತಪ್ಪಿಸಿಕೊಂಡು ಹೋಗುವಂತೆ ಅಪರಾಧಿಯನ್ನು ಪುಸಲಾಯಿಸುತ್ತಾರಂತೆ! ಇನ್ನೇನು ಅಪರಾಧಿ ರಿವಾಲ್ವರ್ ಅಳತೆಯಿಂದ ದೂರವಾಗುತ್ತಿದ್ದಾನೆ ಎನ್ನುವಾಗ 'ಢಮಾರ್' ಎನಿಸುತ್ತಾರಂತೆ.
ಹಾಗಾಗಿಯೇ, ನ್ಯಾಯಾಂಗ ಬಂಧನ ಅವಧಿ ಅ. 22ರವರೆಗೆ ಇದ್ದರೂ ಇವಯ್ಯ ಜೈಲಿಗೆ ಹೋಗುತ್ತಾರೋ, ಇಲ್ಲವೇ ಆಸ್ಪತ್ರೆಯಲ್ಲೇ ಕಾಲ ತಳ್ಳುತ್ತಾರೋ ನೋಡೋಣ ಎಂದು ಜಾಮೀನು ಕೋರಿ ಬಂದ ಯಡಿಯೂರಪ್ಪಗೆ ಜಾಮೀನಿಲ್ಲ ಎಂದು ನ್ಯಾಯಾಧೀಶರು ಪುಸಲಾಯಿಸಿದ್ದಾರೆ.
ಈ ಮಧ್ಯೆ, ಸಿದ್ಲಿಂಗು ಸೇರಿದಂತೆ ಯಾರೆಲ್ಲ ಯಡಿಯೂರಪ್ಪಗೆ ಅಂಟಿಕೊಂಡೇ ಇದ್ದಾರೆ. ಇವರೆಲ್ಲ ಜೈಲು ನಿಯಮಗಳನ್ನು ಹೇಗೆಲ್ಲ ಮುರಿಯುತ್ತಿದ್ದಾರೆ ಎಂಬ ಮಾಹಿತಿಯನ್ನೂ ನಿರಂತರವಾಗಿ ತರಿಸಿಕೊಂಡಿದ್ದಾರೆ.
ಅ. 22ಕ್ಕೆ ನ್ಯಾಯಾಂಗ ಬಂಧನ ಅವಧಿ ಮುಗಿದು, ವಿಚಾರಣೆಗೆ ಬಂದಾಗ ಇವೆಲ್ಲವನ್ನೂ ಯಡಿಯೂರಪ್ಪ ಮುಂದಿಟ್ಟು, ಅವರಿಗೆ ಸರಿಯಾಗಿ ಛೀಮಾರಿ ಹಾಕುವುದು ನ್ಯಾಯಾಧೀಶರ ಇರಾದೆಯಾಗಿತ್ತು ಎನಿಸುತ್ತದೆ. ಆದರೆ ಇದರ ವಾಸನೆ ಅದು ಹೇಗೋ ಯಡಿಯೂರಪ್ಪ ಪಟಾಲಂ ಮೂಗಿಗೆ ಬಡಿದಿದೆ.
ತಡಮಾಡದೆ ಎದ್ನೋ ಬಿದ್ನೋ ಎಂದು ಇಂದು ಬೆಳಗ್ಗೆ ಆಸ್ಪತ್ರೆಗೆ ಬಂದ ಸೋಮಣ್ಣ, ಯೋಗೀಶ್ವರ್... ವಗೈರೆಗಳು ಬೆಡ್ ಶೀಟ್ ಅನ್ನು ಅಲ್ಲೇ ಬಿಟ್ಟು ಯಡಿಯೂರಪ್ಪ ಅವರನ್ನು ಬೆಡ್ ನಿಂದ ಎಬ್ಬಿಸಿಕೊಂಡು ಹೋಗಿದ್ದಾರೆ!












Click it and Unblock the Notifications