ಜೈಲೋ? ಬೇಲೋ ಎಲ್ಲಕ್ಕೂ ಸಿದ್ಧ ಎಂದ ಯಡ್ಡಿ

ಜೈಲಾದರೂ ಸರಿ ಬೇಲ್ ಸಿಕ್ಕರೂ ಸರಿ ನಾನು ತಾಳ್ಮೆ ಕಳೆದುಕೊಳ್ಳುವುದಿಲ್ಲ. ನನ್ನ ದೃಷ್ಟಿ ಬೇರೆ ಕಡೆಗೆ ಇದೆ ಎಂದು ಯಡಿಯೂರಪ್ಪ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ.
ರಾಜಕೀಯ ಮರುಪ್ರವೇಶಕ್ಕೆ ಸರ್ವ ಸಿದ್ಧತೆಗಳು ನಡೆದಿವೆ. ಆದರೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ತೀರ್ಪು ಏನೇ ಆಗಿರಲಿ ಮುಂಬರುವ ಚುನಾವಣೆಗಳಲ್ಲಿ ಪಕ್ಷದ ನೇತೃತ್ವ ವಹಿಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.
ತಮಗೆ ಜಾಮೀನು ಸಿಕ್ಕೇ ಸಿಗುತ್ತದೆ ಎಂಬ ಆತ್ಮ ವಿಶ್ವಾಸ ಹೊಂದಿರುವ ಯಡಿಯೂರಪ್ಪ ಹಾಗಾದಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ತರವಾದ ಬದಲಾವಣೆಯಾಗುವ ಇಂಗಿತ ವ್ಯಕ್ತಪ ಡಿಸಿದ್ದಾರೆ.
ರಾಜ್ಯಾಧ್ಯಕ್ಷ ಪದವಿ ನೀಡಲು ನಕಾರ: ಕೊಪ್ಪಳ ಚುನಾವಣೆ ಗೆದ್ದ ಮೇಲೆ ಈಶ್ವರಪ್ಪ ಅವರ ಸ್ಥಾನವನ್ನು ಅಲ್ಲಾಡಿಸಲು ನೋಡಿದ್ದ ಯಡಿಯೂರಪ್ಪ ಅವರಿಗೆ ನಿರಾಶೆ ಆಗಿದೆ. ಹೈಕಮಾಂಡ್ ಈಶ್ವರಪ್ಪ ಅವರನ್ನು ಕೆಳಗಿಳಿಸಲು ಬಿಲ್ ಕುಲ್ ನಿರಾಕರಿಸಿದೆ.
ಇದರ ಜೊತೆಗೆ ನ್ಯಾಯಾಲಯದಿಂದ ನಿರಪರಾಧಿ ಎಂದು ಸಾಬೀತಾಗದೆ ಹೋದಲ್ಲಿ ರಾಜ್ಯಾಧ್ಯಕ್ಷ ಪಟ್ಟ ಸಿಗುವುದು ಕಷ್ಟ ಎಂಬ ಸಾಮಾನ್ಯ ಅರಿವು ಕೂಡಾ ಯಡಿಯೂರಪ್ಪ ಅವರಿಗಿದೆ.
ಆದರೂ ಜೈಲಿಗೆ ಹೋಗಿ ಬಂದರೆ ಮರ್ಯಾದೆ ಹೆಚ್ಚು ಎಂಬ ಮಾತಿಗೆ ಪುಷ್ಟಿ ನೀಡುವಂತೆ ಯಡಿಯೂರಪ್ಪ ಅವರ ನಡವಳಿಕೆ ಬದಲಾಗಿದೆ. ಹಂಪಿ ಕಡೆ ಹೋಗಿ ಧ್ಯಾನ ಮಾಡಿ ಬಂದ ಯಡಿಯೂರಪ್ಪ ಅವರ ತಲೆಯಲ್ಲಿ ಮತ್ತೇನು ಹೊಸ ತಂತ್ರ ಅಡಗಿದೆಯೋ ಯಾರು ಬಲ್ಲರು.











Click it and Unblock the Notifications