ಕೊಪ್ಪಳದಲ್ಲಿ ಹಳೆಹುಲಿ ಹಿತ್ನಾಳ್ ವಿರುದ್ಧ ಕರಡಿ?

ಅಕ್ರಮ ಗಣಿಗಾರಿಕೆ ವರದಿ ಸ್ಫೋಟಿಸಿ ಯಡಿಯೂರಪ್ಪ ಕುರ್ಚಿಯಿಂದ ಜಾರಿಬಿದ್ದ ಮೇಲೆ ಮತ್ತು ಸದಾನಂದ ಗೌಡರು ರಾಜ್ಯದ ಚುಕ್ಕಾಣಿ ಹಿಡಿದ ನಂತರ ನಡೆಯುತ್ತಿರುವ ಪ್ರಥಮ ಉಪಚುನಾವಣೆ ಬಿಜೆಪಿಗೆ ಭಾರೀ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಹೆಚ್ಚಾಗಿ, ಇಲ್ಲಿ ಕೂಡ ಯಡಿಯೂರಪ್ಪ ಅವರ ಪ್ರಭಾವ ಕಂಡುಬರುತ್ತಿರುವುದು ಅನೇಕರಿಗೆ ಇರುಸುಮುರುಸು ತಂದಿದೆ.
ಬಿಜೆಪಿಯಿಂದ ಹೆಚ್ಚೂಕಡಿಮೆ ಕಣಕ್ಕಿಳಿಯುತ್ತಿರುವ ಕರಡಿ ಸಂಗಣ್ಣ ಅವರು ಯಡಿಯೂರಪ್ಪ ಅವರ ಅಣತಿಯ ಮೇರೆಗೆ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದವರು. ಈ ಕಾರಣಕ್ಕಾಗಿಯೇ ಇಲ್ಲಿ ಉಪಚುನಾವಣೆ ಎದುರಾಗಿದೆ. ಕರಡಿ ಆಯ್ಕೆಗೆ ಸದಾನಂದ ಗೌಡರ ಪೂರ್ಣ ಬೆಂಬಲ ಇಲ್ಲದಿರುವುದು ಸಾಕಷ್ಟು ಫಜೀತಿಗೆ ಕಾರಣವಾಗಿದೆ.
ಬಿಜೆಪಿಯಿಂದ ಉಚ್ಛಾಟಿತರಾಗಿ ಕಾಂಗ್ರೆಸ್ ಸೇರಿರುವ ಬಸವರಾಜ್ ಹಿತ್ನಾಳ್ ಅವರು ಕಾಂಗ್ರೆಸ್ ನಿಂದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. 2008ರ ಚುನಾವಣೆಯಲ್ಲಿ ಹಿತ್ನಾಳ್ ರನ್ನು ಕರಡಿ ಸೋಲಿಸಿದ್ದರು. ಈಗಲೂ ಅದೇ ಮ್ಯಾಜಿಕ್ ಮಾಡುವ ಹವಣಿಕೆ ಬಿಜೆಪಿಯದು. ಆದರೆ, ಯಡಿಯೂರಪ್ಪನವರು ಪ್ರಚಾರಕ್ಕೆ ಹೋಗುತ್ತಾರಾ ಎಂಬುದು ಪ್ರಶ್ನೆಯಾಗಿದೆ.
ಹಿಂದಿನ ಚುನಾವಣೆಗಳನ್ನೆಲ್ಲ ಯಡಿಯೂರಪ್ಪನವರ ನಾಯಕತ್ವದಲ್ಲಿ ಬಿಜೆಪಿ ಜಯಶಾಲಿಯಾಗಿತ್ತು. ಈಗ ನಡೆಯುತ್ತಿರುವ ಚುನಾವಣೆ ಯಡಿಯೂರಪ್ಪ ನಾಯಕತ್ವವಿಲ್ಲದ ಕಾದಾಟ. ಸದಾನಂದ ಗೌಡರು ಕೂಡ ಕೊಪ್ಪಳ ಚುನಾವಣೆ ಪ್ರಚಾರದ ಬಗ್ಗೆ ಬಾಯಿಬಿಡುತ್ತಿಲ್ಲ. ಕರಡಿ ಅವರ ಆಯ್ಕೆಯ ಬಗ್ಗೆ ಕೇಳಿದ್ದಾಗಲೂ ಕಾದು ನೋಡಿ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು.
ಜೆಡಿಎಸ್ ಇನ್ನೂ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಕಾಂಗ್ರೆಸ್ ಇದೇ ತಿಂಗಳು 11ರಿಂದ ಪ್ರಚಾರಕ್ಕೆ ಇಳಿಯಲಿದೆ. ಸೆಪ್ಟೆಂಬರ್ 26ರಂದು ಚುನಾವಣೆ ನಡೆಯಲಿದ್ದು, ಸೆ.29ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications