ವೈದ್ಯನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ಶುಕ್ರವಾರ ಹುದಿಕೇರಿಯ ಜನತಾ ಪ್ರೌಢ ಶಾಲೆಗೆ ತೆರಳಿದ ವಿದ್ಯಾರ್ಥಿನಿಗೆ ತರಗತಿಯಲ್ಲಿ ತಲೆನೋವು ಕಾಣಿಸಿಕೊಂಡಿದೆ. ಈ ಸಂದರ್ಭ ಶಿಕ್ಷಕರು ಆಕೆಯ ಜೊತೆಯಲ್ಲಿ ಮತ್ತೊಬ್ಬಳು ವಿದ್ಯಾರ್ಥಿನಿಯನ್ನು ಸೇರಿಸಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದರು. ಅಲ್ಲಿನ ವೈದ್ಯ ರವಿಕುಮಾರ್ ಎಂಬಾತ ವಿದ್ಯಾರ್ಥಿನಿಯನ್ನು ಪರೀಕ್ಷಿಸುವ ನೆಪದಲ್ಲಿ ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾಗಿದ್ದಾನೆ.
ವೈದ್ಯನ ಈ ರೀತಿಯ ಅನುಚಿತ ವರ್ತನೆಯಿಂದ ಬೆದರಿದ ವಿದ್ಯಾರ್ಥಿನಿಯರು ಅಲ್ಲಿಂದ ಪಾರಾಗಿ ನೇರವಾಗಿ ಶಾಲೆಗೆ ಬಂದು ಮುಖ್ಯ ಶಿಕ್ಷಕಿಗೆ ವಿಷಯ ತಿಳಿಸಿದ್ದಾರೆ. ಅವರು ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ. ಈ ವಿಷಯ ಗ್ರಾಮದಲ್ಲಿ ಒಬ್ಬರ ಬಾಯಿಂದ ಮತ್ತೊಬ್ಬರಿಗೆ ಹರಡಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ. ಅಲ್ಲದೆ, ವೈದ್ಯ ರವಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಹಿಂದೆಯೂ ವೈದ್ಯ ರವಿಕುಮಾರ್ ಹಲವು ವಿದ್ಯಾರ್ಥಿನಿಯರಿಗೆ ಇದೇ ರೀತಿ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ಇದಕ್ಕೂ ಮೊದಲು ಕುಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದಾಗಲೂ ಇದೇ ರೀತಿ ಅನುಚಿತವಾಗಿ ವರ್ತಿಸಿದ ಪರಿಣಾಮ ಹುದಿಕೇರಿಗೆ ವರ್ಗಾಯಿಸಲಾಗಿತ್ತು. ಆದರೆ ತನ್ನ ಚಾಳಿಯನ್ನು ಬಿಡದ ವೈದ್ಯ ರವಿಕುಮಾರ್ ಇಲ್ಲೂ ಕೂಡ ಅದನ್ನು ಮುಂದುವರೆಸಿ ಸಿಕ್ಕಿಬಿದ್ದಿದ್ದಾನೆ.
ವೈದ್ಯ ರವಿಕುಮಾರ್ ವಿರುದ್ಧ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಡಿಎಚ್‌ಓ ಅವರು ತಕ್ಷಣದಿಂದಲೇ ಕಡ್ಡಾಯ ರಜೆಯಲ್ಲಿ ತೆರಳುವಂತೆ ಆದೇಶಿಸಿದ್ದಾರೆ. ಆದರೆ ಇಂತಹ ಕಾಮುಕ ವೈದ್ಯ ಕೊಡಗಿನಲ್ಲಿ ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications