ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಬಂಧನವಾದ್ರೆ ರಾಜ್ಯ ಸರಕಾರ ಪತನ ?

By Srinath
|
Google Oneindia Kannada News

karnataka-bjp-govt-jittery-over-ex-cm-bsy-arrest
ಬೆಂಗಳೂರು, ಆಗಸ್ಟ್ 22: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬಂಧನವಾದ್ರೆ ಡಿವಿಎಸ್ ಸರಕಾರ ಬಿದ್ದುಹೋಗುತ್ತಾ? ರಾಜ್ಯದಲ್ಲಿ ರಾಜಕೀಯ ಆಲ್ಲೋಲ ಕಲ್ಲೋಲ ಸೃಷ್ಟಿಯಾಗಲಿದೆಯಾ?

ಯಡಿಯೂರಪ್ಪ ಆಸ್ಪತ್ರೆಗೆ ಎಡತಾಕುತ್ತಿರುವುದರ ಹಿಂದಿನ ಗುಟ್ಟೇನು? ಅವರಿಗೆ ಆಗಲೇ ಬಂಧನದ ಮುನ್ಸೂಚನೆಯೇನಾದರೂ ಸಿಕ್ಕಿದೆಯಾ? ವಾರದ ಆರಂಭದ ದಿನ ಇಂತಹುದೇ ಪ್ರಶ್ನೆಗಳು ರಾಜ್ಯದೆಲ್ಲೆಡೆ ರೌಂಡ್ ಹಾಕುತ್ತಿವೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಆಗಲೇ ನಾಲ್ಕಾರು ಕೇಸುಗಳು ಅವರ ಕೊರಳಿಗೆ ಉರುಳಾಗಿದ್ದು ಬಂಧನದ ಕುಣಿಕೆ ಬಿಗಿಯಾಗುತ್ತಿದೆ. ಯಡಿಯೂರಪ್ಪ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆಗಳು ಒಂದೊಂದಾಗಿ ನ್ಯಾಯಾಲಯದ ಮುಂದೆ ಬರುತ್ತಿದ್ದು, ಯಾವ ಅರ್ಜಿ ತಿರಸ್ಕೃತವಾಗತ್ತೋ ಯಾವ ಅರ್ಜಿ ಊರ್ಜಿತವಾಗತ್ತೋ ನ್ಯಾಯಾಲಯಕ್ಕೇ ಬಿಟ್ಟ ವಿಷಯ.

ಈ ಮಧ್ಯೆ, ಅಕ್ರಮ ಗಣಿಗಾರಿಕೆಯಿಂದ ಪ್ರೇರಣಾ ಟ್ರಸ್ಟ್ ಗೆ 10 ಕೋಟಿ ರು. ಸಂದಾಯವಾಗಿರುವ ಪ್ರಕರಣದಲ್ಲಿ ರಾಜ್ಯಪಾಲರ ಅನುಮತಿ ಮೇರೆಗೆ ಲೋಕಾಯುಕ್ತ ಎಡಿಜಿಪಿ ಜೆ ಕೆ ಗಾಂವ್ ಕರ್ ಅವರು ಸೋಮವಾರ FIR ಸಿದ್ಧಪಡಿಸಿದ್ದು, ಯಡಿಯೂರಪ್ಪ ಅವರನ್ನೇ ಮೊದಲ ಆರೋಪಿಯನ್ನಾಗಿಸಿದ್ದಾರೆ. ಅವರಿಬ್ಬರು ಪುತ್ರರನ್ನು ನಂತರದ ಆರೋಪಿ ಸ್ಥಾನಗಳಲ್ಲಿ ಕೂಡಿಸಿದ್ದಾರೆ. ಇನ್ನು ಭೂತಾಕಾರವಾಗಿ ಕಾಡುತ್ತಿರುವುದು ಅಕ್ರಮ ಗಣಿ ವರದಿ. ಸ್ವತಃ ಅವರ ಸ್ಥಾನಕ್ಕೇ ಸಂಚಕಾರ ತಂದ ಲೋಕಾಯುಕ್ತರ ಅಕ್ರಮ ಗಣಿಗಾರಿಕೆ ವರದಿ ಇನ್ನೂ ನ್ಯಾಯಾಂಗದ ಮುಂದೆ ಬಂದಿಲ್ಲ.

ಒಬ್ಬ ವ್ಯಕ್ತಿಯ ವಿರುದ್ಧ FIR ದಾಖಲಾದ ಮಾತ್ರಕ್ಕೆ ಆ ವ್ಯಕ್ತಿ ತಪ್ಪಿತಸ್ಥನಾಗುವುದಿಲ್ಲ. ನ್ಯಾಯಾಂಗದ ಎಲ್ಲ ಪ್ರಕ್ರಿಯೆಗಳನ್ನೂ ದಾಟಿದ ನಂತರವೇ ಆರೋಪಿ ತಪ್ಪಿತಸ್ಥನೋ, ಅಲ್ಲವೋ ಅನ್ನುವುದು ತೀರ್ಮಾನವಾಗುವುದು ನ್ಯಾಯನೀತಿ. ಈ ದೇಶದಲ್ಲಿ ನ್ಯಾಯ, ನೀತಿ ಮತ್ತು ನ್ಯಾಯ ನಿರ್ಣಯ ಇನ್ನೂ ಜೀವಂತವಾಗಿದೆ ಎಂಬ ಆಶಾಭಾವ ಇಟ್ಟುಕೊಳ್ಳಲಿಕ್ಕೆ ಅಡ್ಡಿಯಿಲ್ಲ.

ಈಗ ಮತ್ತೆ ವಾಸ್ತವಕ್ಕೆ ಬರೋಣ. ಯಡಿಯೂರಪ್ಪ ಅವರ ಜಾಮೀನು ಅರ್ಜಿ ವಿಚಾರಣೆಗೆ ಬಂದಾಗ ಕೋರ್ಟ್ ಕಠಿಣ ನಿಲುವು ತೆಗೆದುಕೊಂಡರೆ ಗತಿಯೇನು? ಏನು ಗತಿ ಅಂದರೆ... ಡಿವಿಎಸ್ ಸರಕಾರ ಪತನದ ಅಂಚಿಗೆ ಬೀಳುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾರೆ ರಾಜಕೀಯ ಚಿಂತಕರು. ಅಂದರೆ ಅತ್ತ ಯಡ್ಡಿಯೂರಪ್ಪ ಬಂಧನವಾಗುತ್ತಿದ್ದಂತೆ ಅವರ ಹಿತೈಶಿಗಳು ಸರಕಾರದ ಅಸ್ತಿತ್ವಕ್ಕೆ ಸಂಚಕಾರ ತರಬಹುದು.

ಒಬ್ಬ ಯಡಿಯೂರಪ್ಪ ಪರಪ್ಪನ ಅಗ್ರಹಾರ ಸೇರಿಕೊಳ್ಳುತ್ತಿದ್ದಂತೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಅವರ ಇಡೀ ಪಟಾಲಂ ಸ್ಕೆಚ್ ಹಾಕಲಿದೆ. ಯಡಿಯೂರಪ್ಪ ಬೆಂಬಲಿಗ ಶಾಸಕರು, ಸಚಿವರು ಸಾಮೂಹಿಕ ರಾಜೀನಾಮೆ ಅಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೊನೆಗೆ ಯಡಿಯೂರಪ್ಪ ಪಟಾಲಂ ಪರೋಕ್ಷವಾಗಿ ನ್ಯಾಯಾಂಗದ ಮೇಲೆ ಬ್ಲ್ಯಾಕ್ ಮೇಲ್ ತಂತ್ರ ಪ್ರಯೋಗಿಸಬಹುದಾ? ಎಂಬ ತರ್ಕಗಳು ಗರಿಗೆದರಿವೆ. ಒಟ್ಟಿನಲ್ಲಿ ಈ ವಾರ ರಾಜ್ಯ ರಾಜಕೀಯ ಮತ್ತೆ ಗೊಂದಲದ ಗೂಡಾಗಬಹುದೆಂಬ ಗುಮಾನಿ ರಾಜಕೀಯ ವಲಯಗಳಲ್ಲಿ ತಾಂಡವವಾಡುತ್ತಿದೆ.

English summary
With handful of criminal cases pending against Karnataka ex Chief Minister B.S. Yeddyurappa, what would happen if BSY is arrested? Will the government fall? Sadananda Gowdas BJP Government in a jittery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X