ಮದ್ರಾಸ್ (ಚೆನ್ನೈ) ಗೆ 372ನೇ ಹುಟ್ಟುಹಬ್ಬದ ಹಾರೈಕೆ

ಆ.22, 1639ರಂದು ಸ್ಥಳೀಯ ನಾಯಕ ಜನಾಂಗಕ್ಕೆ ಸೇರಿದ್ದ ಭೂಮಿಯನ್ನು ಖರೀದಿಸಿದ ಅಂದಿನ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಡೆ, ಸೇಂಟ್ ಜಾರ್ಜ್ ಕೋಟೆ ಕಟ್ಟಿದ. ಮದ್ರಾಸ್ ಎಂದು ಪುನರ್ ನಾಮಕರಣ ಮಾಡಿದ. ಇಂದಿಗೂ ಈ ಕಟ್ಟಡ ತಮಿಳುನಾಡು ಸರ್ಕಾರದ ಆಡಳಿತ ಕಚೇರಿಯಾಗೇ ಉಳಿದಿರುವುದು ವಿಶೇಷ.
ಸಣ್ಣ ಪುಟ್ಟ ಗ್ರಾಮೀಣ ಭಾಗಗಳನ್ನು ಹೊಂದಿಕೊಂಡಿದ್ದ ಮದ್ರಾಸ್ ನಂತರ 4.6 ಮಿಲಿಯನ್ (2001 ಜನಗಣತಿ) ಜನರಿಗೆ ಆಶ್ರಯತಾಣವಾಗಿದ್ದು, ಭಾರತ ಪ್ರಮುಖ ಮೆಟ್ರೋ ಸಿಟಿಯಾಗಿ ಗುರುತಿಸಿಕೊಂಡಿದೆ. ಈ ವಾರ ಪೂರ್ತಿ ಮದ್ರಾಸ್ ಡೇ ಆಚರಣೆಗೆ ಎನ್ ಜಿಒಗಳು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಚೆನ್ನಪ್ಪನಾಯಕನ್ ಎಂದು ನಾಯಕ ಜನಾಂಗದ ಮುಖಂಡನ ಹೆಸರು ಪಡೆದಿದ್ದ ನಗರ ನಂತರ ಚೆನ್ನಪ್ಪಪಟ್ಟಿನಂ ಆಗಿ ಮದ್ರಾಸ್, ಚೆನ್ನೈ ಆಗಿ ಮಾರ್ಪಟ್ಟಿದೆ.
ಬ್ರಿಟಿಷ್ ಸಾಮ್ರಾಜ್ಯ ಸ್ಥಾಪಿಸಿದ ರಾಬರ್ಟ್ ಕ್ಲೈವ್ ಮದುವೆ ಕೂಡಾ ಫೋರ್ಟ್ ಸೆಂಟ್ ಜಾರ್ಜ್ ನಲ್ಲಿ ಆಗಿದ್ದು ವಿಶೇಷ. 1997ರಲ್ಲಿ ಕರುಣಾನಿಧಿ ಸರ್ಕಾರ ಚೆನ್ನೈ ಎಂದು ನಾಮಕರಣ ಮಾಡಿತ್ತು.
ಮದ್ರಾಸ್ ಗೆ ಮೊದಲು ಕಾಲಿರಿಸಿದ ಪೋರ್ಚುಗೀಸರು ಕಟ್ಟಿದ ಸೇಂಟ್ ಥಾಮಸ್ ಮೌಂಟ್ ಚರ್ಚ್ ಸೇರಿದಂತೆ ಹತ್ತು ಹಲವು ಪುರಾತನ ಕಟ್ಟಡಗಳ ರಕ್ಷಣೆಗಾಗಿ ಹೆರಿಟೇಜ್ ವಾಕ್ ಹಮ್ಮಿಕೊಳ್ಳಲಾಗಿದೆ. ಸಂಗೀತ, ಸಾಹಿತ್ಯ, ಸಿನಿಮಾ, ಲಲಿತಕಲೆ, ಜವಳಿ, ಆರೋಗ್ಯ, ಆಟೋಮೊಬೈಲ್ ಅಲ್ಲದೆ, ಐಟಿ ಉದ್ಯಮಕ್ಕೂ ಚೆನ್ನೈ ಪ್ರಮುಖ ಕೇಂದ್ರವಾಗಿದೆ.
ಆದರೆ, ಶತಮಾನಗಳು ಕಳೆದರೂ ಸಾರಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಇಂದಿಗೂ ಈ ಪ್ರಾಚೀನ ನಗರವನ್ನು ಕಾಡುತ್ತಲೇ ಇದೆ. ಆದರೂ ಎರಡನೇ ಸ್ವಚ್ಛನಗರ ಎಂಬ ಹೆಗ್ಗಳಿಕೆ ಗಳಿಸಿರುವ ಚೆನ್ನೆಗೆ ಹುಟ್ಟು ಹಬ್ಬದ ದಿನದಂದು ಶುಭ ಹಾರೈಕೆಗಳು.












Click it and Unblock the Notifications