ಓದಿಗೆ ಹೆದರಿ ಮೈಸೂರಿನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿ(ಎಸ್‌ಡಿಎಂಸಿ)ನ ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ಮೇಘಶ್ರೀ(21) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಅಂತಿಮ ವರ್ಷದ ಬಿಎಸ್ಸಿ ಪದವಿಯಲ್ಲಿ ಓದುತ್ತಿದ್ದಳಾದರೂ ಓದು ತಲೆಗೆ ಹತ್ತುತ್ತಿರಲಿಲ್ಲ.
ಹೀಗಾಗಿ ಒಂದು ರೀತಿಯ ಖಿನ್ನತೆ ಮೇಘಶ್ರೀಯನ್ನು ಆವರಿಸಿಕೊಂಡಿತ್ತು. ಆದ್ದರಿಂದ ತನ್ನ ಗೆಳತಿಯರೊಂದಿಗೆ ತನಗೆ ಓದಲು ಸಾಧ್ಯವಾಗುತ್ತಿಲ್ಲ ಎಂಬ ವಿಷಯವನ್ನು ಹೇಳಿಕೊಂಡಿದ್ದಳು. ಏನೂ ಮಾಡಲಾಗದೆ ಒಬ್ಬಂಟಿಯಾಗಿಯೇ ಕೊರಗುತ್ತಿದ್ದಳು. ಈಕೆಯ ಸಮಸ್ಯೆ ಬಗ್ಗೆ ತಿಳಿದ ಹೆತ್ತವರು ಯೋಗ ತರಗತಿಗೆ ಸೇರಿಸಿದ್ದರಾದರೂ ಮೇಘಶ್ರೀ ಮಾತ್ರ ಬದಲಾಗಿರಲಿಲ್ಲ.
ತನ್ನ ಸಮಸ್ಯೆಗೆ ಆತ್ಮಹತ್ಯೆವೊಂದೇ ಪರಿಹಾರ ಎಂಬ ತೀರ್ಮಾನಕ್ಕೆ ಬಂದ ಮೇಘಶ್ರೀ ಸೋಮವಾರ ಬೆಳಿಗ್ಗೆ 9.30ರ ವೇಳೆಗೆ ಮನೆಯಿಂದ ಕಾಲೇಜಿಗೆಂದು ಬಂದವಳು ಜಯನಗರದ ಬಳಿಯ ರೈಲ್ವೆ ಹಳಿಯತ್ತ ತೆರಳಿದ್ದಾಳೆ. ಆ ಹೊತ್ತಿನಲ್ಲಿ ಬಂದ ರೈಲು ಆಕೆಯ ಮೇಲೆ ಹರಿದಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮಕೈಗೊಂಡಿದ್ದಾರೆ.












Click it and Unblock the Notifications