ನಗುಮೊಗದ ಸದಾನಂದಗೌಡ ಮುಂದಿನ ಮುಖ್ಯಮಂತ್ರಿ?

ಬಿಜೆಪಿ ಉನ್ನತ ಮೂಲಗಳಿಂದ ತಿಳಿದುಬಂದಿರುವ ಸಂಗತಿಯೆಂದರೆ, ಯಾರಿಂದಲೂ ವೈರತ್ವ ಕಟ್ಟಿಕೊಳ್ಳದ, ಎಲ್ಲರಿಗೂ ಬೇಕಾಗಿರುವ ನಗುಮೊಗದ ಡಿವಿ ಸದಾನಂದಗೌಡರೇ ಈ ಪಟ್ಟವೇರಲು ಸರಿಯಾದ ವ್ಯಕ್ತಿ ಎಂದು ಬಿಜೆಪಿ ಹೈಕಮಾಂಡ್ ಒಮ್ಮತದ ನಿರ್ಧಾರಕ್ಕೆ ಬಂದಿದೆ.
ಅಂತಿಮ ನಿರ್ಧಾರ ನಾಳೆ, ಜು. 29ರಂದು ಹೊರಬೀಳುವ ನಿರೀಕ್ಷೆಯಿದ್ದು, ಕರ್ನಾಟಕ ಬಿಜೆಪಿ ಶಾಸಕರ ಅಭಿಮತವನ್ನು ಪಡೆಯಲು ಬಿಜೆಪಿ ವರಿಷ್ಠರು ನಿರೀಕ್ಷಿಸಿದ್ದಾರೆ. ಯಡಿಯೂರಪ್ಪಗೆ ರಾಜೀನಾಮೆ ನೀಡಬೇಕೆಂದು ಖಚಿತ ಸಂದೇಶ ರವಾನೆಯಾಗಿದ್ದು, 12 ಗಂಟೆ ಡೆಡ್ ಲೈನ್ ನೀಡಲಾಗಿದೆ.
ಇದರ ಜೊತೆಗೆ, ಅನೇಕ ಹಿರಿಯ ಶಾಸಕರ ಹೆಸರುಗಳು ಕೂಡ ಕೇಳಿಬರುತ್ತಿವೆ. ಕೆಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್ ಇವರಲ್ಲಿ ಪ್ರಮುಖರಾಗಿದ್ದಾರೆ. ಪದವನ್ನು ತೊರೆಯಲು ಯಡಿಯೂರಪ್ಪ ಯಾವ ಷರತ್ತು ವಿಧಿಸಿದ್ದಾರೆ ಎಂಬ ಬಗ್ಗೆಯೂ ಖಚಿತ ವರ್ತಮಾನವಿಲ್ಲ.
ಈ ನಡುವೆ, ಯಡಿಯೂರಪ್ಪ ಕೂಡ ತಮ್ಮ ಆಪ್ತ ಶಾಸಕರೊಂದಿಗೆ ಸ್ವನಿವಾಸದಲ್ಲಿ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಅವರ ಜೊತೆಗೆ ಸುಮಾರು 25 ಶಾಸಕರು ಇದ್ದಾರೆಂದು ತಿಳಿದುಬಂದಿದೆ. ಅವರ ಮುಂದಿನ ನಡೆಯೇನಾಗಲಿದೆ ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications