ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ್ಪು ತಿಂದವರು ನೀರು ಕುಡಿಯಲೇಬೇಕು: ಭಿನ್ನರ ರಾಗ

By Mahesh
|
Google Oneindia Kannada News

BJP Dissidents on BSY Step down
ತುಮಕೂರು, ಜು. 27: ಯಡಿಯೂರಪ್ಪ ಕೆಳಗಿಳಿಯುವ ತನಕ ನಾವು ರಾಜ್ಯಕ್ಕೆ ಬರುವುದಿಲ್ಲ ಎಂದು ಮುಷ್ಕರ ಹೂಡಿದ್ದ ಬಿಜೆಪಿಯ ಭಿನ್ನಮತೀಯರು ಏನು ಮಾಡುತ್ತಿದ್ದಾರೆ? ಎಲ್ಲಾ ಹಗರಣಗಳು ಸೇರಿ ಯಡಿಯೂರಪ್ಪ ಅವರ ಕುತ್ತಿಗೆ ಹಿಸುಕುತ್ತಿರುವಾಗ ಭಿನ್ನರು ಏಕೆ ಎಲ್ಲೋ ಅಡಗಿ ಕೂತಿದ್ದಾರೆ? ಯಾರು ಯಾರು ಎಲ್ಲೆಲ್ಲಿ ಆಶ್ರಮ ಪಡೆದಿದ್ದಾರೆ ಕುತೂಹಲದಿಂದ ಹುಡುಕ ಹೊರಟಾಗ ಮೊದಲಿಗೆ ಸಿಕ್ಕವರು ಶ್ರೀಮಾನ್ ವೆಂಕಟರಮಣಪ್ಪನವರು.

ಏನ್ ಸಾರು ಯಡಿಯೂರಪ್ಪ ಅವರಿಗೆ ಹೀಗೆ ಆಗಿದೆ ಏನ್ ಹೇಳ್ತೀರಾ? ಅಂದ್ರೆ..'ಉಪ್ಪು ತಿಂದವರು ನೀರು ಕುಡಿಯಲೇಬೇಕು', ಅಕ್ರಮ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರ ವರದಿ ಬಂದ ನಂತರ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕಾಗುತ್ತದೆ. ಕಷ್ಟದಲ್ಲಿ ಕುಸಿಯುತ್ತಿದ್ದಾಗ ಕೈ ಹಿಡಿದು ಮೇಲಕ್ಕೆತ್ತಿದವರನ್ನೇ ಕೆಳಕ್ಕೆ ದೂಡುವ ಜಯಮಾನ ಯಡಿಯೂರಪ್ಪನವರದು ಎಂದು ಮಾಜಿ ಸಚಿವ ಹಾಗೂ ಪಾವಗಡ ಶಾಸಕ ವೆಂಕಟರಮಣಪ್ಪ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಕಳೆದ ಎರಡೂವರೆ ವರ್ಷಗಳಿಂದ ಯಡಿಯೂರಪ್ಪ ಅವರು ಹತ್ತಿರದಿಂದ ಗಮನಿಸಿದ್ದೇನೆ. ಯಡಿಯೂರಪ್ಪ ರಾಜೀನಾಮೆ ನೀಡುವುದು ಅನುಮಾನ. ಬಿಜೆಪಿಯಲ್ಲಿ ಹೈಕಮಾಂಡ್, ಲೋ ಕಮಾಂಡ್ ಎಲ್ಲವೂ ಯಡಿಯೂರಪ್ಪನವರೇ ಆಗಿದ್ದಾರೆ. ದೆಹಲಿ ಹೈ ಕಮಾಂಡ್ ಎನ್ನುವುದು ನಾಮಕಾವಸ್ಥೆಗೆ ಅಷ್ಟೇ ಎಂದು ವೆಂಕಟರಮಣಪ್ಪ ಹೇಳಿದರು.

ಶಿವಮೊಗ್ಗ, ಸಾಗರ ಕಡೆ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಬಯಸಿ ಭಿನ್ನರ ಗುಂಪು ಸೇರಿದ್ದ ಬೇಳೂರು ಗೋಪಾಲಕೃಷ್ಣ ಈಗ ಬೆಕ್ಕಿನ ಮರಿಯಂತೆ ಯಡಿಯೂರಪ್ಪ ಅವರ ಹಿಂದೆ ಬಂದು ಕೈ ಕಟ್ಟಿ ನಿಂತಿದ್ದಾರೆ. ಇನ್ನು ಪಕ್ಷೇತರರಲ್ಲಿ ಸಕತ್ ಟ್ಯಾಲೆಂಟೆಡ್ ವರ್ತೂರು ಪ್ರಕಾಶ್ ಭಿನ್ನತನದ ನಾಟಕ ಆರಂಭಕ್ಕೆ ಮುನ್ನವೇ ಪಕ್ಷ ಬದಲಾಯಿಸಿದ್ದಾರೆ. ಚಿತ್ರದುರ್ಗ, ಹಿರಿಯೂರು ಕಡೆಯ ಗೂಳಿಹಟ್ಟಿ ಶೇಖರ್, ಡಿ ಸುಧಾಕರ್ ಎಲ್ಲೂ ಬಟ್ಟೆ ಹರಿದುಕೊಂಡಿದ್ದು, ಗೊಟರು ಹಾಕಿದ್ದು ನಮ್ಮ ಪ್ರತಿನಿಧಿ ಕಿವಿಗೆ ಬಿದ್ದಿಲ್ಲ.

ಬಯಲಾಟದ ಎಕ್ಸ್ ಪರ್ಟ್ ಶಂಕರಲಿಂಗೇಗೌಡರು ಕುಟುಂಬ ಕಲಹಕ್ಕೆ ಭಿನ್ನಮತ ಲೇಪ ಬಳಿದು ಹಾದಿ ಬೀದಿಯಲ್ಲಿ ಕುಣಿದಿದ್ದಷ್ಟೇ ಬಂತು. ಮತ್ತೆ ಯಡಿಯೂರಪ್ಪ ಪಾಳೆಯದಲ್ಲಿ ಅವರ ನೆರಳು ಸಹ ಸೋಕಲು ಸಾಧ್ಯವಿಲ್ಲ. ರೇಣುಕಾಚಾರ್ಯ ಆರು ಕೊಟ್ಟ ಸಿಎಂ ಪರ ನಿಂತು ಮೂರು ಕೊಟ್ಟ ವಿರೋಧಿಗಳ ಗುಂಪಿಗೆ ಸಡ್ಡು ಹೊಡೆದಿದ್ದಾರೆ. ಕೋತಿ ತಾನು ತಿಂದು ಮೇಕೆ ಮೂತಿಗೆ ಬಳಿದಂತೆ ಬಂಡಾಯ ನಾಟಕವನ್ನು ಯಶಸ್ವಿಯಾಗಿ ಆಡಿ, ಅನ್ಯಥಾ ಶರಣಂ ನಾಸ್ತಿ ಎಂದು ಯಡಿಯೂರಪ್ಪ ಅವರ ಕಾಲು ಹಿಡಿದಿದ್ದಾರೆ.

ಅಂತಿಮವಾಗಿ ಯಡಿಯೂರಪ್ಪ ಅವರಿಗೆ ಆಂತರಿಕವಾಗಿ ಬೆಂಬಲವಿಲ್ಲ ಎಂಬ ಮಾತು ಒಂದರ್ಥದಲ್ಲಿ ನಿಜವಾದರೂ ಯಾರು ಯಡಿಯೂರಪ್ಪ ಅವರನ್ನು ಎದುರಿಸಿ ನಿಲ್ಲುವ ಧೈರ್ಯ ಮಾಡುವುದಿಲ್ಲ. ಯಡಿಯೂರಪ್ಪ ಮತ್ತೊಮ್ಮೆ ತಮ್ಮ ತಂತ್ರಗಾರಿಕೆಯಿಂದ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸುವುದನ್ನು ನಾಡಿನ ಜನತೆ ಕುತೂಹಲದಿಂದ ನೋಡುವ ಕ್ಷಣ ಇನ್ನೇನೂ ಹತ್ತಿರದಲ್ಲಿದೆ.

English summary
Pavagada MLA and Ex minister Venkataramanappa took a chance to blame Scam Hit Karnataka CM BS Yeddyurappa. Venkatatamanappa demanded Yeddyurappa should step down on the basis of Illegal Mining report by Lokayukta. Where are the other dissidents of Karnataka BJP?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X