ಆದಾಯ ತೆರಿಗೆ ಪಾವತಿಗೆ ಈ ಬಾರಿಯೂ ಇನ್ಫೋಸಿಸ್ ನೆರವು

ಇಲಾಖೆ ಜತೆಗಿನ 250 ಕೋಟಿ ರುಪಾಯಿಗಳ ಈ ಒಪ್ಪಂದವನ್ನು ಐದು ವರ್ಷಗಳ ಅವಧಿಗೆ ಇನ್ಫೋಸಿಸ್ ಕಂಪನಿ 2009ರಲ್ಲಿ ಪಡೆದುಕೊಂಡಿದೆ. ನಾಲ್ಕು ಹಂತಗಳ 'ಸಿಪಿಸಿ' ಕಟ್ಟಡದಲ್ಲಿ ಇನ್ಫೋಸಿಸ್ ಹೊರಗುತ್ತಿಗೆಯ 200 ಮತ್ತು ಇಲಾಖೆಯ 35 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. 2009ರಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಇನ್ಫೋಸಿಸ್ ಪ್ರಧಾನ ಕಚೇರಿಯಲ್ಲಿ ಈ ವಿಭಾಗ ಕಾರ್ಯನಿರ್ವಹಿಸಿತ್ತು.
ಇದೊಂದು ಸರ್ಕಾರಿ ಮತ್ತು ಖಾಸಗಿ ಸಂಸ್ಥೆ ಪಾಲುದಾರಿಕೆಗೆ ಅತ್ಯುತ್ತಮ ನಿದರ್ಶನವಾಗಿದೆ. ಬೆಂಗಳೂರಿನಲ್ಲಿ ಇರುವ ಆದಾಯ ತೆರಿಗೆ ಇಲಾಖೆಯ ಅರ್ಜಿ ವಿಲೇವಾರಿ ಕೇಂದ್ರವು (ಸಿಪಿಸಿ) ಕೆಲ ರಿಟರ್ನ್ಸ್‌ಗಳನ್ನು ಪರಿಶೀಲಿಸಿ ಮರು ಪಾವತಿ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿದೆ. ಆನ್‌ಲೈನ್‌ನಲ್ಲಿ ಸಲ್ಲಿಸುವ ರಿಟರ್ನ್ಸ್‌ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಇನ್ಫೋಸಿಸ್‌ನ ತಂತ್ರಜ್ಞಾನವು ನೆರವಿಗೆ ಬಂದಿದೆ.
ಇನ್ಫೋಸಿಸ್ ಹೊರಗುತ್ತಿಗೆಯ ನೆರವಿನಿಂದ ಆದಾಯ ತೆರಿಗೆ ಇಲಾಖೆಯು ರಿಟರ್ನ್ಸ್‌ಗಳನ್ನು ಕೆಲವೇ ವಾರಗಳಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗಿದೆ. ವರ್ಷಗಳ ಹಿಂದೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಗರಿಷ್ಠ ಒಂದೂವರೆ ವರ್ಷದಷ್ಟು ಸಮಯ ಬೇಕಾಗುತ್ತಿತ್ತು.
'ಇ-ಫೈಲಿಂಗ್' ಸೌಲಭ್ಯದಡಿ ಸಲ್ಲಿಸಲಾಗುವ ರಿಟರ್ನ್ಸ್‌ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಇಲಾಖೆಯ ಕೇಂದ್ರೀಕೃತ ವಿಲೇವಾರಿ ಕೇಂದ್ರದಲ್ಲಿ ಅಗತ್ಯವಾದ ತಂತ್ರಜ್ಞಾನ ಸೇರಿದಂತೆ ಮೂಲ ಸೌಕರ್ಯಗಳನ್ನೆಲ್ಲ ಅಳವಡಿಸಲಾಗಿದೆ. ದಿನವೊಂದಕ್ಕೆ ಒಂದು ಲಕ್ಷದಷ್ಟು ರಿಟರ್ನ್ಸ್‌ಗಳನ್ನು ಇಲ್ಲಿ ನಿರ್ವಹಿಸಲಾಗುತ್ತಿದೆ. 2011-12ನೇ ಸಾಲಿನಲ್ಲಿ ಅಂದಾಜು 1.5 ಕೋಟಿಗಳಷ್ಟು ಅರ್ಜಿಗಳನ್ನು ನಿರ್ವಹಿಸಲಾಗುವುದು. ಆನ್‌ಲೈನ್‌ನಲ್ಲಿ ರಿಟರ್ನ್ಸ್ ಸಲ್ಲಿಕೆ ಪ್ರಮಾಣವು 2009-10 ವರ್ಷಕ್ಕೆ ಹೋಲಿಸಿದರೆ ಶೇ 80ರಷ್ಟು ಹೆಚ್ಚಳಗೊಂಡಿದೆ ಎಂದು ಆದಾಯ ತೆರಿಗೆ ಕಮಿಷನರ್ ಸಂಜಯ್ ಕುಮಾರ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಉಚಿತ ಕರೆ ಸೌಲಭ್ಯ: ಹೊರಗುತ್ತಿಗೆ ಕಾಲ್‌ಸೆಂಟರ್ ನಲ್ಲಿ 60 ದೂರವಾಣಿ ಸಂಖ್ಯೆಗಳು ಉಚಿತ ಕರೆ ಸೌಲಭ್ಯದಡಿ ಕಾರ್ಯನಿರ್ವಹಿಸುತ್ತಿವೆ. ಕರೆಗಳ ದಟ್ಟಣೆ ಅವಧಿಯಲ್ಲಿ ಕೊಂಚ ಅಡಚಣೆ ಉಂಟಾದರೂ, ಪ್ರತಿ ದಿನ 3000 ಜನರ ಅಹವಾಲು ಆಲಿಸಲಾಗುತ್ತಿದೆ ಎಂದು ಆಡಿಷನಲ್ ಕಮಿಷನರ್ ಆರ್. ಕೆ. ಮಿಶ್ರಾ ಹೇಳುತ್ತಾರೆ. ವಾರಾಂತ್ಯದ ರಜೆ ದಿನಗಳಲ್ಲಿ ಕೂಡ ಜನರು ಧ್ವನಿ ಆಧಾರಿತ ಸೇವೆ ಮೂಲಕ ತಮ್ಮ ದೂರುಗಳನ್ನು ದಾಖಲಿಸಬಹುದು. 'ಸಹಜ್' ಮತ್ತು 'ಸುಗಮ್' ಅರ್ಜಿ ನಮೂನೆಗಳಲ್ಲಿ 'ಇ-ಫೈಲಿಂಗ್' ಸಲ್ಲಿಕೆ ಹೆಚ್ಚು ಸರಳೀಕರಣಗೊಂಡಿದೆ












Click it and Unblock the Notifications