ಕರಾವಳಿಯಲ್ಲಿ ಮಳೆ ಆರ್ಭಟ : ಸಮುದ್ರ ಕೊರೆತದ ಭೀತಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇದೇ ರೀತಿ ಮಳೆ ಆರ್ಭಟ ಮುಂದುವರಿದರೆ ಸಮುದ್ರ ಕೊರೆತ ಹೆಚ್ಚಾಗುವ ಸಾಧ್ಯತೆ ಇದೆ. ತೆಂಕ ಎರ್ಮಾಳಿನ ಮನ್ಸ ಗುರಿಕಾರ ಅವರ ತೋಟದ ಬಳಿ ಈಗಾಗಲೇ ನಾಲ್ಕು ತೆಂಗಿನಮರಗಳು ಸಮುದ್ರ ಸೇರಿವೆ. ಮೂರು ಅಪಾಯದ ಸ್ಥಿತಿಯಲ್ಲಿವೆ. ಮೋಹನ್ ಅಮೀನ್ ಮತ್ತು ಮೀನಾ ಎಸ್. ಅಮೀನ್ ಅವರ ತಲಾ ಎರಡು ತೆಂಗಿನ ಮರಗಳು ಸುಮುದ್ರಕ್ಕೆ ಉರುಳಿವೆ. ಮೋಹನ್ ಅಮೀನ್ ಅವರ ಮೂರು ತೆಂಗಿನ ಮರಗಳು ಅಪಾಯದಲ್ಲಿವೆ.
ಸ್ಥಳಕ್ಕೆ ಉಡುಪಿ ತಹಶೀಲ್ದಾರ್ ಪ್ರಸನ್ನಕುಮಾರ್, ದ.ಕ. ಮೀನು ಮಾರಾಟ ಫೆಡರೇಶನ್ ಸದಸ್ಯ ಸತೀಶ್ ಸಾಲ್ಯಾನ್ ಎರ್ಮಾಳು, ತೆಂಕ ಮೊಗವೀರ ಸಭಾದ ಅಧ್ಯಕ್ಷ ಶ್ರೀಧರ ಬಂಗೇರ, ತೆಂಕ ಗ್ರಾ. ಪಂ. ಅಧ್ಯಕ್ಷೆ ಜಯಶ್ರಿ ಎಸ್. ಪೂಜಾರ್ತಿ ಮುಂತಾದವರು ಭೇಟಿ ನೀಡಿದ್ದಾರೆ.
ಇಲ್ಲಿ ಸುಮಾರು 70 ಮೀಟರ್ ಪ್ರದೇಶದಲ್ಲಿ ಸಮುದ್ರ ಕೊರೆತ ಕಾಣಿಸಿಕೊಂಡಿದೆ. ಆದರೆ ತೀರಾ ಅಪಾಯವನ್ನೆದುರಿಸುತ್ತಿರುವ 30 ಮೀಟರ್ ಉದ್ದಕ್ಕೆ ಸಮುದ್ರ ತಡಿಯಲ್ಲಿ ಪ್ರಾಕೃತಿಕ ವಿಕೋಪ ನಿಧಿಯಿಂದ ತುರ್ತು ಕಾಮಗಾರಿಯಾಗಿ ಬಂಡೆಗಲ್ಲುಗಳನ್ನು ಪೇರಿಸುವ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ ಎಂದು ಉಡುಪಿ ತಹಶೀಲ್ದಾರ್ ಪ್ರಸನ್ನಕುಮಾರ್ ಹೇಳಿದ್ದಾರೆ.












Click it and Unblock the Notifications