ಅನಂತ ಸಂಪತ್ತು : ಇಂದು ಮಧ್ಯಂತರ ತೀರ್ಪು

ಕೇರಳದ ಅನಂತಪದ್ಮನಾಭ ದೇಗುಲದಲ್ಲಿ ಸಿಕ್ಕಿರುವ ಅಪಾರ ಪ್ರಮಾಣದ ಆಸ್ತಿಯನ್ನು ಪಟ್ಟಿ ಮಾಡುವ, ಈ ಪ್ರಕ್ರಿಯೆಯನ್ನು ವಿಡಿಯೋ ಮಾಡುವ ಮತ್ತು ದೇಗುಲಕ್ಕೆ ಭಾರೀ ಭದ್ರತೆ ಒದಗಿಸುವ ಪ್ರಕರಣ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಶುಕ್ರವಾರಕ್ಕೆ ಕಾದಿರಿಸಿದೆ. ಇದೇ ವೇಳೆ ಬಿ ಕೋಣೆಯನ್ನು ತೆರೆಯುವ ಮೊದಲು ದೇವಪ್ರಶ್ನೆ ಕೇಳಬೇಕೆಂದು ರಾಜಮನೆತನದವರು ಸಲಹೆ ಮಾಡಿದ್ದಾರೆ.
ದೇವರ ಸಿಟ್ಟಿಗೆ ಗುರಿಯಾಗಬೇಕಾದೀತು: ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಕೊನೆಯ ರಹಸ್ಯ ಉಗ್ರಾಣದ ಬಾಗಿಲು ತೆರೆದರೆ ದೇವರ ಸಿಟ್ಟಿಗೆ ಗುರಿಯಾಗಬೇಕಾದೀತು ಎಂದು ತಿರುವಾಂಕೂರು ರಾಜ ಮನೆತನದ ರಾಮ ವರ್ಮ ಸುಪ್ರೀಂಕೋರ್ಟಿಗೆ ತಿಳಿಸಿದ್ದಾರೆ. ಉಗ್ರಾಣವನ್ನು ತೆರೆಯುವ ಮೊದಲು ಶಾಂತಿ ನಡೆಸಿ ದೇವರನ್ನು ಸಂಪ್ರೀತಗೊಳಿಸುವುದು ಒಳಿತು ಎಂದೂ ಅವರು ಸಲಹೆ ಮಾಡಿದ್ದಾರೆ.
ಬಿ ಉಗ್ರಾಣದ ಬಾಗಿಲಿನಲ್ಲಿ ಅಪಾಯದ ಸಂಕೇತವಾಗಿರುವ ನಾಗಮುದ್ರಿಕೆಯಿದೆ. ಈ ಉಗ್ರಾಣವನ್ನು ತೆರೆಯುವುದರಿಂದ ಅಪಶಕುನಗಳು ಉಂಟಾಗಬಹುದು. ಆದ್ದರಿಂದ ಈ ನಿಟ್ಟಿನಲ್ಲಿ ಯಾವುದೇ ನಿರ್ದೇಶನಗಳನ್ನು ಕೊಡಬಾರದೆಂದು ಇಂದು ಸಲ್ಲಿಸಿರುವ ಅಫಿಡವಿಟ್ ನಲ್ಲಿ ಅವರು ಸುಪ್ರೀಂಕೋರ್ಟಿಗೆ ಸಲಹೆ ಮಾಡಿದ್ದಾರೆ.
ಅನಂತ ಪದ್ಮನಾಭ ದೇವರ ಸಿಟ್ಟಿಗೆ ಈಡಾಗದಿರಲು ದೇವ ಪ್ರಶ್ನೆಯಿಟ್ಟ ಬಳಿಕ ಈ ಕುರಿತು ತೀರ್ಮಾನ ಕೈಗೊಳ್ಳುವುದು ಒಳ್ಳೆಯದು. ಈ 'ಕಲ್ಲರ'ವನ್ನು ತೆರೆದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ನಂಬಿಕೆ ಭಕ್ತರಲ್ಲಿದೆ. ಇದು ಶತಮಾನಗಳಿಂದ ಪಾಲಿಸಿಕೊಂಡು ಬಂದಿರುವ ದೇವಸ್ಥಾನದ ಸಂಪ್ರದಾಯ ಎಂದು ರಾಮ ವರ್ಮ ಪರವಾಗಿ ವಾದಿಸುತ್ತಿರುವ ಕೆ. ಕೆ. ವೇಣುಗೋಪಾಲ್ ಹೇಳಿದರು.












Click it and Unblock the Notifications