ಚಂದ್ರ ಲೇಔಟ್: ವಿದ್ಯುತ್ ತಂತಿ ತುಳಿದು ವಿದ್ಯಾರ್ಥಿನಿ ಸಾವು

ರೇಣುಕಮ್ಮ ಎಂಬುವರ ಪುತ್ರಿ ಸುನಿತಾ ಉರುಫ್ ಯಲ್ಲಮ್ಮ (8) ಮೃತಪಟ್ಟ ಬಾಲಕಿ. ಇವಳು ಗಂಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಳು. ಬೆಳಿಗ್ಗೆ 8 ಗಂಟೆ ಸುಮಾರಿಗೆ ಶಾಲೆಗೆ ಹೋಗಿದ್ದ ಬಾಲಕಿ, ಶಾಲೆಯ ಸಮೀಪದ ಆಟದ ಮೈದಾನದಲ್ಲಿ ಆಟವಾಡಿ ಹೊರಗೆ ಬರುತ್ತಿದ್ದಾಗ ತಂತಿಯನ್ನು ತುಳಿದಳು.
ವಿದ್ಯುತ್ ಪ್ರವಹಿಸಿ ಕುಸಿದು ಬಿದ್ದ ಆಕೆಯನ್ನು ಸಾರ್ವಜನಿಕರು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆ ವೇಳೆಗೆ ಸುನಿತಾ ಸಾವನ್ನಪ್ಪಿದಳು ಎಂದು ಚಂದ್ರಾಲೇಔಟ್ ಪೊಲೀಸರು ತಿಳಿಸಿದ್ದಾರೆ.
ಒಬ್ಬಳೇ ಮಗಳು : ರೇಣುಕಮ್ಮ ರಾಯಚೂರಿನ ಸಂಕ್ಲ್ಯಾಪುರದವರು. ಹಲವು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ಗಂಗೊಂಡನಹಳ್ಳಿಯಲ್ಲಿ ನೆಲೆಸಿದ್ದರು. ಮನೆಗೆಲಸ ಮಾಡಿ ಜೀವನ ಸಾಗಿಸುವ ಅವರಿಗೆ ಸುನಿತಾ ಒಬ್ಬಳೇ ಮಗಳು. ಪತಿ ಹನುಮಂತಪ್ಪ ದೂರವಾಗಿರುವ ಕಾರಣ ಅವರು ಮಗಳ ಜತೆ ಜೀವನ ನಡೆಸುತ್ತಿದ್ದರು. 'ತಿಂಡಿ ತಿಂದ ಅವಳು ಶಾಲೆಗೆ ಹೋಗಿ ಬರುತ್ತೇನೆ' ಎಂದು ಟಾಟಾ ಮಾಡಿ ಹೋಗಿದ್ದಳು.
'ನಾನೇ ಅವಳನ್ನು ರಸ್ತೆ ದಾಟಿಸಿ ಬಂದಿದ್ದೆ. ಪತಿಯಿಂದ ದೂರವಾಗಿದ್ದ ನಾನು ಮಗಳನ್ನೇ ಸರ್ವಸ್ವ ಎಂದುಕೊಂಡು ಆಕೆಗೋಸ್ಕರ ಜೀವನ ಸಾಗಿಸುತ್ತಿದ್ದೆ. ಈಗ ನನಗೆ ಯಾರು ದಿಕ್ಕು' ಎಂದು ರೇಣುಕಮ್ಮ ಕಣ್ಣೀರಿಟ್ಟ ದೃಶ್ಯ ಮನಕಲಕುವಂತಿತ್ತು. ಶಾಲೆ ಆರಂಭವಾಗುವುದು ಬೆಳಿಗ್ಗೆ ಒಂಬತ್ತು ಗಂಟೆಗೆ. ಆದರೆ ರೇಣುಕಮ್ಮ ಎಂಟು ಗಂಟೆಗೇ ಮನೆಗೆಲಸಕ್ಕೆ ಹೋಗಬೇಕಿದ್ದ ಕಾರಣ ಸುನಿತಾ ಎಂಟು ಗಂಟೆಗೆ ಶಾಲೆಗೆ ಹೋಗುತ್ತಿದ್ದಳು. ಮೈದಾನದಲ್ಲಿ ಅರ್ಧ ಗಂಟೆ ಆಟವಾಡಿ ಆ ನಂತರ ಶಾಲೆಯ ಬಳಿ ತೆರಳುತ್ತಿದ್ದಳು ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ.
ಒಂದು ಲಕ್ಷ ರೂಪಾಯಿ ಪರಿಹಾರ: ಮೃತ ಬಾಲಕಿಯ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಪಿ. ಮಣಿವಣ್ಣನ್ ಹೇಳಿದರು. ಶಾಸಕ ಪ್ರಿಯಕೃಷ್ಣ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಬಾಲಕಿಯ ಅಂತ್ಯಕ್ರಿಯೆಗೆ ಅವರು ಐದು ಸಾವಿರ ರೂಪಾಯಿ ನೀಡಿದರು.












Click it and Unblock the Notifications