ಸನ್ ಟಿವಿ ವಿರುದ್ಧ ದೂರು ದಾಖಲಿಸಿದ ಸ್ವಾಮಿ ನಿತ್ಯಾನಂದ

ಕಳೆದ ವರ್ಷ ಸನ್ ನೆಟ್‌ವರ್ಕ್‌ನ ಒಡೆಯ ಕಲಾನಿಧಿ ಮಾರನ್ ಮತ್ತು ಅದರ ಉನ್ನತ ಅಧಿಕಾರಿಗಳು, ತಮ್ಮ ಆಶ್ರಮದ ಆಧ್ಯಾತ್ಮಿಕ ಗುರು ಮತ್ತು ನಟಿಯೊಬ್ಬಳು ಆಕ್ಷೇಪಾರ್ಹ ಭಂಗಿಯಲ್ಲಿರುವ ಸನ್ನಿವೇಶದ ಚಿತ್ರಣವನ್ನು ಪ್ರಸಾರ ಮಾಡಿ ಆಶ್ರಮದ ಘನತೆಗೆ ಮಸಿ ಬಳಿರುವುದಾಗಿ ಆರೋಪಿಸಿ ನಿತ್ಯಾನಂದ ಆಶ್ರಮದ ವತಿಯಿಂದ ಗುರುವಾರ ಪೊಲೀಸ್ ದೂರು ದಾಖಲಾಗಿದೆ.
ಪೊಲೀಸ್ ಕಮಿಶನರ್ ಜೆ.ಕೆ. ತ್ರಿಪಾಠಿ ಅವರಿಗೆ ಸಲ್ಲಿಸಲಾದ ದೂರಿನಲ್ಲಿ ಮಾರನ್ ಮತ್ತು ಸನ್ ಟಿವಿಯ ವರಿಷ್ಠ ಹಂಸರಾಜ್ ಸಕ್ಸೇನಾ ವಿರುದ್ಧ ದೂರು ದಾಖಲಿಸಲಾಗಿದೆ. ನೆಟ್‌ವರ್ಕ್ ಸಿಬಂದಿ ಯಾರ ಒಪ್ಪಿಗೆಯೂ ಇಲ್ಲದೆ ಆಶ್ರಮದೊಳಗೆ ಅತಿಕ್ರಮಣ ಮಾಡಿ ಆಶ್ರಮ ವಾಸಿಗಳ ಮೇಲೆ ಹಲ್ಲೆ ನಡೆಸಿದ್ದರು ಎಂದೂ ದೂರಿನಲ್ಲಿ ಹೇಳಲಾಗಿದೆ.
ವರದಿಗಾರರೊಂದಿಗೆ ಮಾತನಾಡಿದ ಧ್ಯಾನಪೀಠದ ನಿತ್ಯಸರ್ವಾನಂದ '2010 ಮಾರ್ಚ್ 3ರಂದು ಸನ್ ಟಿವಿಯಲ್ಲಿ ನಮ್ಮ ಸಂಸ್ಥೆಗೆ ಸಂಬಂಧಿಸಿದಂತೆ ಮಾನಹಾನಿಕರ ಸಂಗತಿಗಳನ್ನು ಬಿತ್ತರಿಸಲಾಗಿದೆ. ಈ ಬಗ್ಗೆ ನಾವು ಕಲಾನಿಧಿ ಮಾರನ್ ಮತ್ತು ಹಂಸರಾಜ್ ವಿರುದ್ಧ ದೂರು ದಾಖಲಿಸಿರುವುದಾಗಿ ಹೇಳಿದರು. ಕಲಾನಿಧಿ ಮಾರನ್ ಅವರು ದಯಾನಿಧಿ ಮಾರನ್ ಅವರ ಸೋದರ. ಇವರಿಬ್ಬರೂ ಡಿಎಂಕೆಯ ವರಿಷ್ಠ ಕರುಣಾನಿಧಿಯ ಸಮೀಪ ಬಂಧುಗಳು.
ವಿವಿಧ ಚಾನೆಲ್‌ಗಳಲ್ಲಿ ಮೂಡಿಬಂದ ತಥಾಕಥಿತ ಪ್ರಸಾರದ ಹಿಂದೆ ಆಶ್ರಮದ ಕೀರ್ತಿಗೆ ಮಸಿ ಬಳಿಯುವ ಉದ್ದೇಶವಿತ್ತು. ಆ ಪ್ರಸಾರದ ಬಳಿಕ ನಿತ್ಯಾನಂದ ಸ್ವಾಮಿಯನ್ನು ಬಂಧಿಸಲಾಯಿತು. ಸ್ವಾಮಿಯ ಮೇಲೆ ಅತ್ಯಾಚಾರದ ದೂರನ್ನೂ ದಾಖಲಿಸಿ ತೇಜೋವಧೆ ಮಾಡಲಾಯಿತು ಎಂದು ಅವರು ಹೇಳಿದರು.












Click it and Unblock the Notifications