ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಚಂದಗುಳಿ ಗಣಪನಿಗೆ ಘಂಟೆಯೇ ನೈವೇದ್ಯ!

By * ಸತೀಶ್ ಭಟ್, ಮಾಗೋಡು, ಯಲ್ಲಾಪುರ
|
Google Oneindia Kannada News

Gante Ganapati Temple, Yellapur
ಏನು ನಿಮ್ಮ ಸಮಸ್ಯೆ? ನೌಕರಿಯಾಗಿಲ್ಲವಾ?, ವಯಸ್ಸು 40 ದಾಟಿದರೂ ಮದುವೆಯ ಭಾಗ್ಯ ಕೂಡಿ ಬಂದಿಲ್ಲವಾ?ದಾಯಾದಿ ಕಲಹವಾ? ಆಸ್ತಿ ಸಮಸ್ಯೆಯಾ? ಸಂತಾನವಿಲ್ಲವಾ? ಆರೋಗ್ಯ ಹದಗೆಟ್ಟಿದೆಯಾ? ಚಿಂತೆ ಬಿಡಿ, ಬನ್ನಿ ಈ ವಿನಾಯಕನ ಬಳಿಗೆ.ಇದೇನು,ಇಂಥಹ ಸಮಸ್ಯೆಗಳು ಎದುರಾದರೆ ವೈದ್ಯರ ಬಳಿ ಹೋಗುತ್ತೇವೆ. ವಕೀಲರ ಸಹಾಯ ಪಡೆಯುತ್ತೇವೆ.ಆದರೆ,ಇದೆಲ್ಲಾ ಸಮಸ್ಯೆಗಳನ್ನೂ ಒಟ್ಟಿಗೇ ಪರಿಹರಿಸುವ ಭೂಪ ಯಾರೆಂದಿರಾ? ಇದ್ದಾನೆ! ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮದಲ್ಲಿ. ಆತ ಘಂಟೆ ಗಣಪ!

ಆಸ್ತಿಕ ವರ್ಗದಲ್ಲಿ ತನ್ನದೇ ಅಪಾರ ಸಂಖ್ಯೆಯ ಭಕ್ತಾದಿಗಳನ್ನು ಹೊಂದಿ, ನಿತ್ಯ ಪೂಜಿಸಲ್ಪಡುತ್ತಿರುವ ಈ ಗಣಪ ಜಿಲ್ಲೆಯ ಮಾತು ಬಿಡಿ ಹೊರ ರಾಜ್ಯಗಳಲ್ಲಿಯೂ ಭಕ್ತರನ್ನು ಹೊಂದಿದ್ದಾನೆಂದರೆ ನಂಬಲೇ ಬೇಕು.ಘಂಟೆ ಗಣಪನೆಂಬ ಅನ್ವರ್ಥ ಹುಟ್ಟಿಕೊಳ್ಳಲೂ ಕಾರಣವಿದೆ. ನಿಮ್ಮ ಸಮಸ್ಯೆ ಯಾವುದೇ ಇರಲಿ.ಪರಿಹಾರಕ್ಕಾಗಿ ಈತ ಕೇಳುವದು ನಿಮ್ಮ ಶಕ್ತಿಗೆ ಅನುಸಾರವಾಗಿ ಯಾವುದೇ ಗಾತ್ರದ ಘಂಟೆಯಷ್ಟೇ.ನಂಬಿ ಕೆಟ್ಟವರಿಲ್ಲ ಎನ್ನುತ್ತಾರೆ.

ಹಾಗೆಯೇ ಈ ಘಂಟೆ ಗಣಪನನ್ನು ನಂಬಿದವರಿಗೆ ಪರಿಹಾರವೂ ದೊರೆಯದಿಲ್ಲ. ಅಚ್ಚರಿಯೆಂದರೆ, ಭಕ್ತರು ಇಲ್ಲಿ ಬಂದು ತಮ್ಮ ಸಮಸ್ಯೆಯ ಪರಿಹಾರಕ್ಕಾಗಿ ಹರಕೆ ಹೊತ್ತ ನಂತರ ಅವರ ಪ್ರತಿಯೊಂದು ಸಮಸ್ಯೆಯೂ ಪರಿಹಾರವಾಗುತ್ತದೆ.ಇದು ಕೇವಲ ನಂಬಿಕೆಯ ವಿಷಯವಷ್ಟೇ ಅಲ್ಲ. ಸತ್ಯವೂ ಕೂಡ.

ಹೀಗೆ ಭಕ್ತಾದಿಗಳು ಸಲ್ಲಿಸಿ ಹೋದ ಘಂಟೆಗಳ ದೊಡ್ಡ ಸಾಲೇ ಇಲ್ಲಿದೆ.ಈ ದೇವಸ್ಥಾನದಲ್ಲಿ ಎತ್ತ ಕಣ್ಣು ಹಾಯಿಸಿದರೂ ಬರೀ ಘಂಟೆಗಳೇ!ಕಿರುಬೆರಳಿನಾಕಾರದ ಘಂಟೆಗಳಿಂದ ಹಿಡಿದು ದೊಡ್ಡ ದೊಡ್ಡ ಘಂಟೆಗಳು.ಪ್ರವೇಶ ದ್ವಾರದಲ್ಲೂ ಘಂಟೆ.ಕಿಟಕಿಗಳ ಮೇಲ್ಗಡೆಗೂ ಘಂಟೆ.ಅಷ್ಟೇ ಅಲ್ಲ,ದೇವಾಲಯದ ಛಾವಣಿಯ ತೊಲೆ, ಜಂತಿಗಳಲ್ಲೂ ಸಾಲುಸಾಲು ಘಂಟೆಗಳು.ಗೋಪುರದ ಸುತ್ತಲೂ ಘಂಟೆಗಳು.....ಈ ಘಂಟೆಗಳ ಸಾಲನ್ನು ನೋಡುವದೇ ಸಂಭ್ರಮ.

ಇಲ್ಲಿ ಪ್ರಸಾದ ಕೇಳುವದು ಎಂಬ ವಿಶಿಷ್ಠ ಪದ್ಧತಿಯೂ ಇದೆ.ಸಮಸ್ಯೆಗಳ ಪರಿಹಾರಕ್ಕಾಗಿ ಆತನಲ್ಲಿಯೇ ಮೊರೆಹೋಗುವದು.ಅರ್ಚಕರ ಪ್ರಾರ್ಥನೆಯ ನಂತರ ಯಾವ ಹರಕೆಗೆ ಪ್ರಸಾದ ಸಿದ್ಧಿಸುತ್ತದೋ ಆ ಹರಕೆಯನ್ನು ನಂತರ ತೀರಿಸಿಕೊಳ್ಳಬೇಕಷ್ಟೆ.

ಈ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾದಿಗಳ ಬಾಯಿಂದ ಬಾಯಿಗೆ ಹರಡಿದ ಗಣಪನ ಮಹಿಮೆ ಹೊರರಾಜ್ಯಗಳಲ್ಲೂ ಹಬ್ಬಿದೆ.ನೆರೆಯ ಗೋವಾ,ಮಹಾರಾಷ್ಟ್ರಗಳಿಂದ ಪ್ರತಿನಿತ್ಯವೂ ಭಕ್ತಾದಿಗಳು ಬರುತ್ತಾರೆ.ಸಂಕಷ್ಟಹರ ಚತುರ್ಥಿ,ಅಂಗಾರಕ ಚತುರ್ಥಿಗಳ ದಿನವಂತೂ ಇಲ್ಲಿ ಜಾತ್ರೆಯೇ ನೆರೆದಿದೆಯೇನೋ ಎಂಬಷ್ಟು ಜನ ಸೇರುತ್ತಾರೆ.

ಗಣಹವನ, ಮೋದಕ ಹವನಗಳು ನಿರಂತರವಾಗಿ ನಡೆಯುತ್ತವೆ. ಹಚ್ಚ ಹಸಿರಿನ ನಡುವೆ ಇರುವ ಚಂದಗುಳಿ, ಕಳೆದ ನಾಲ್ಕಾರು ವರ್ಷಗಳಿಂದೀಚೆಗಷ್ಟೇ ಪ್ರಸಿದ್ಧವಾಗುತ್ತಿದೆ.1992ರಲ್ಲಿ ನೂತನ ಕಟ್ಟಡ ಸ್ಥಾಪನೆಗೊಂಡು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳಿಂದ ನೂತನ ಮೂರ್ತಿ ಪ್ರತಿಷ್ಠಾಪನೆಗೊಂಡಿದೆ.

ಏನಿಲ್ಲವೆಂದರೂ ಇಲ್ಲಿರುವ ಸಾಲು ಸಾಲು ಘಂಟೆಗಳನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದಾದರೂ ಇಲ್ಲೊಮ್ಮೆ ಬರಲೇಬೇಕು ನೀವು.ಯಲ್ಲಾಪುರದಿಂದ 17 ಕಿ.ಮೀ ದೂರವಿರುವ ಚಂದಗುಳಿ ದೇವಸ್ಥಾನ ತಲುಪಲು ಮಾಗೋಡು ಜಲಪಾತದ ಮಾರ್ಗದಲ್ಲಿ ಸಾಗಬೇಕು.ಬಸ್ ಸೌಕರ್ಯವಿದೆ.

ಅಲ್ಲದೆ,ಶಿರಸಿ-ಯಲ್ಲಾಪುರ ರಸ್ತೆಯಲ್ಲಿರುವ ಮಳಲಗಾಂ-ಮಾಗೋಡು ಕೂಡು ರಸ್ತೆಯಿಂದಲೂ ತಲುಪಬಹುದು. ದೇವಸ್ಥಾನದ ಪೂಜೆ ಹಾಗೂ ಇತರ ಮಾಹಿತಿಗಳಿಗೆ ದೇವಾಲಯದ ದೂ.ಸಂ:(08419)238 380,238 395 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.

;
English summary
Chandaguli Gante Ganapati Temple is very famous in Yellapur taluk, Uttara Kannada district of Karnataka. Lord Ganesha temple is a museum of bells (Gante). Devotees offer bells to god and submit prayers prayers. Ganapti temple is around 17 km from Yellapur.;
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X