ಇಂಟರ್ನೆಟ್ ಜೂಜಾಟ: 25 ಕೋಟಿ ಪಂಗನಾಮವಿಟ್ಟ ಚೋರರ ಸೆರೆ

ಕೆಂಗೇರಿಯ ಬಾಬಾ ಸಾಹೇಬ್‌ಪಾಳ್ಯದ ಆರ್.ಪಿ. ಉಮಾದೇವಿ (40), ಚಿಕ್ಕಲಸಂದ್ರದ ಕೆನರಾ ಬ್ಯಾಂಕ್ ಕಾಲೊನಿಯ ಉಮೇಶ್ ಶ್ರೀಧರ್ (53) ಮತ್ತು ಕುಂಬಳಗೋಡಿನ ಮೋಹನ್‌ಕುಮಾರ್ (25) ಬಂಧಿತರು. ಆರೋಪಿಗಳಿಂದ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ವಾಹನ, ಪೀಠೋಪಕರಣ ಹಾಗೂ ಆಸ್ತಿ ಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಕೆಂಗೇರಿಯ ಕೋಟೆ ವಿದ್ಯಾಪೀಠ ರಸ್ತೆಯಲ್ಲಿರುವ ಶ್ರೀಕಂಠಪ್ಪ ಕಾಂಪ್ಲೆಕ್ಸ್‌ನಲ್ಲಿ ಎಸ್.ಎಸ್. ಎಂಟರ್ ಪ್ರೈಸಸ್ 'ಕ್ಲಿಕ್ ಥ್ರೂ ನೆಟ್‌ವರ್ಕ್' ಎಂಬ ಸಂಸ್ಥೆ ಆರಂಭಿಸಿದ್ದರು. ಮನೆಯಲ್ಲಿಯೇ ಕುಳಿತು ಜೂಜಾಡುವ ಮೂಲಕ ಸಾವಿರಾರು ರೂಪಾಯಿ ಹಣ ಗಳಿಸಬಹುದು ಎಂದು ಜಾಹೀರಾತು ನೀಡಿದ್ದರು. ಈ ಆಟವಾಡಲು ಕೋಡ್ ಸಂಖ್ಯೆ ಪಡೆಯಬೇಕೆಂದು ತಲಾ ಒಬ್ಬೊಬ್ಬರಿಂದ ಒಂದೊಂದು ಸಂಖ್ಯೆಗೆ 12 ರಿಂದ 32 ಸಾವಿರ ರೂಪಾಯಿ ಹಣ ಪೀಕಿದ್ದರು. ನಂತರ ವನ್ ಫೈನ್ ಡೇ ಎಲ್ಲರಿಗೂ ಉಂಡೆನಾಮ ತಿಕ್ಕಿ ಪರಾರಿಯಾಗಿದ್ದರು.
ಉಮಾದೇವಿ ಪ್ರಕರಣದ ಪ್ರಮುಖ ಆರೋಪಿ, ಉಳಿದವರು ಆಕೆಗೆ ಸಹಾಯ ಮಾಡಿದ್ದರು. ಇನ್ನೂ ಎಷ್ಟು ಮಂದಿಗೆ ವಂಚನೆ ಮಾಡಿದ್ದಾರೆ ಮತ್ತು ಹಣವನ್ನು ಏನು ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
'ಇದೊಂದು ರೀತಿಯ ಜೂಜಾಟ. ಕ್ಲಿಕ್ ಥ್ರೂ ನೆಟ್‌ವರ್ಕ್‌ನಲ್ಲಿ ಗುಡ್ ಅಂಡ್ ಬ್ಯಾಡ್ ಎಂಬ ಎರಡು ಆಯ್ಕೆಗಳು ಬರುತ್ತಿದ್ದವು. ಗುರುತಿನ ಸಂಖ್ಯೆ ಪಡೆದವರು ಅದನ್ನು ಬಳಸಿ ಇದರಲ್ಲಿ ಒಂದಕ್ಕೆ ಕ್ಲಿಕ್ ಮಾಡಬೇಕಿತ್ತು. ಕ್ಲಿಕ್ ಮಾಡಿದಾಗ ಹಣ ಗಳಿಸುತ್ತಿದ್ದರು ಅಥವಾ ಕಳೆದುಕೊಳ್ಳುತ್ತಿದ್ದರು. ಕೆಲವರು ನೂರಕ್ಕೂ ಅಧಿಕ ಗುರುತಿನ ಸಂಖ್ಯೆಗಳನ್ನು ಪಡೆದು ಆಟವಾಡುತ್ತಿದ್ದರು. ಸುಮಾರು ಒಂದು ವರ್ಷದವರೆಗೆ ಇದನ್ನು ನಡೆಸಿದ ಉಮಾದೇವಿ ನಂತರ ತಲೆಮರೆಸಿಕೊಂಡಿದ್ದಳು' ಎಂದು ಎಸಿಪಿ ಎಚ್.ಎಸ್.ದುಗ್ಗಪ್ಪ ತಿಳಿಸಿದರು.
ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಮತ್ತು ಡಿಸಿಪಿ ಕೃಷ್ಣಂ ರಾಜು ಅವರ ಮಾರ್ಗದರ್ಶನದಲ್ಲಿ ದುಗ್ಗಪ್ಪ ಹಾಗೂ ಇನ್‌ಸ್ಪೆಕ್ಟರ್ ಕೆ. ನಾಗರಾಜ್ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.












Click it and Unblock the Notifications