ವಿದೇಶಿಯರ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆಗೆ ಅನುಮತಿ

ಈ ವರೆಗಿನ ನಿಯಮಾವಳಿಗಳ ಪ್ರಕಾರ ಭಾರತದ ಪ್ರಜೆಗಳು, ವಿದೇಶೀ ಸಾಂಸ್ಥಿಕ ಹೂಡಿಕೆದಾರರು, ಹಾಗೂ ಅನಿವಾಸಿ ಭಾರತೀಯರು ಮಾತ್ರ ಹೂಡಿಕೆ ಮಾಡಬಹುದಾಗಿದೆ. ದೇಶದ ವಿತ್ತೀಯ ಕೊರತೆ ಹೆಚ್ಚಿರುವದು, ಹೆಚ್ಚುತ್ತಿರುವ ಆಮದು ಹಾಗೂ ವಿದೇಶೀ ಹೂಡಿಕೆಯ ಏರಿಳಿತ ತಪ್ಪಿಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಇದರಿಂದ ವಿದೇಶೀ ಸಾಂಸ್ಥಿಕ ಹೂಡಿಕೆದಾರರ ಅವಲಂಬನೆ ಹಾಗೂ ಏರಿಳಿತವನ್ನು ಕಡಿಮೆ ಮಾಡಬಹುದಾಗಿದೆ. ಇದರಿಂದ ಮ್ಯೂಚುವಲ್ ಫಂಡ್ ಉದ್ಯಮಕ್ಕೆ 45,000 ಕೋಟಿ ರೂಪಾಯಿಗಳಷ್ಟು ವಿದೇಶೀ ಹೂಡಿಕೆ ಹರಿದು ಬರಲಿದ್ದು ಈಗ ಮ್ಯೂಚುವಲ್ ಫಂಡ್ ಉದ್ಯಮ ಒಟ್ಟು 7,31,448 ಕೋಟಿ ರೂಪಾಯಿಗಳಷ್ಟು ಹಣವನ್ನು ನಿರ್ವಹಿಸುತ್ತಿದ್ದು ಇದರಲ್ಲಿ 1,92,087 ಕೋಟಿ ರೂಪಾಯಿಗಳನ್ನು ಶೇರು ಮಾರುಕಟ್ಟೆಯಲ್ಲಿ ಹೂಡಲಾಗಿದೆ.
ಈ ವಿದೇಶೀ ಹೂಡಿಕೆಯ ಮಿತಿಯನ್ನು ಮುಂದಿನ 6 ತಿಂಗಳ ನಂತರ ಪರಿಷ್ಕರಿಸಲಾಗುವುದಲ್ಲದೆ, ವಿದೇಶೀಯರು ದೀರ್ಘಾವಧಿಯ ಹೂಡಿಕೆಯ ಪ್ರಯೋಜನದೊಂದಿಗೆ ಮಾರುಕಟ್ಟೆಯ ಆಳವನ್ನು ಹೆಚ್ಚಿಸಲಿದೆ ಎಂದು ಹಣಕಾಸು ಸಚಿವಾಲಯದ ಜಂಟಿ ಕಾರ್ಯದರ್ಶಿ ಥೋಮಸ್ ಮ್ಯಾಥ್ಯೂ ತಿಳಿಸಿದರು.
ಈ ಹೂಡಿಕೆದಾರರನ್ನು ಕ್ವಾಲಿಫೈಡ್ ಫಾರಿನ್ ಇನ್ವೆಸ್ಟರ‍್ಸ್ ಎಂದು ಕರೆಯಲಾಗುವುದು. ಇವರು ಡಿಮ್ಯಾಟ್ ಅಕೌಂಟ್ ಪ್ರಾರಂಭಿಸುವ ಮೂಲಕ ವಹಿವಾಟು ಮತ್ತು ತಮ್ಮ ಡೆಪಾಸಿಟರಿ ಮೂಲಕ ಯೂನಿಟ್ ಗಳನ್ನು ಖರೀದಿಸಬಹುದಾಗಿದ್ದು ಇದನ್ನು ಭಾರತೀಯ ಬ್ಯಾಂಕ್ ಗಳಲ್ಲಿ ಡೆಪಾಸಿಟ್ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.












Click it and Unblock the Notifications