ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳ ಹತ್ಯೆ: KFD, PFI ನಿಷೇಧ ಸನ್ನಿಹಿತ

By Srinath
|
Google Oneindia Kannada News

KFD- PFI on verge of ban Karnataka
ಮೈಸೂರು, ಜೂನ್ 26: ರಾಜ್ಯದಲ್ಲಿ ಈಗ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (KFD) ಹಾಗೂ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ (PFI) ಎರಡೂ ಸಂಘಟನೆಗಳ ನಿಷೇಧಕ್ಕೆ ಈಗ ಕಾಲ ಸನ್ನಿಹಿತಗೊಂಡಿದೆ. ಈ ಮಧ್ಯೆ, ಕೆಡಿಎಫ್ ನಿಷೇಧ ವಿಚಾರನ್ನು ಅಲ್ಪಸಂಖ್ಯಾತರ ಆಯೋಗ ಸ್ವಾಗತಿಸಿದೆ.

ಕೆಎಫ್‌ಡಿ ಮತ್ತು ಪಿಎಫ್‌ಐ ಎರಡೂ ಸಂಘಟನೆಗಳನ್ನು ಸ್ಟೂಡೆಂಟ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್ ಇಂಡಿಯಾ (ಸಿಮಿ) ಸಂಘಟನೆ ಮಾದರಿಯಲ್ಲೇ ನಿಷೇಧಿತ ಸಂಘಟನೆಯೆಂದು ಘೋಷಿಸಲು ಸರಕಾರ ಈ ಬಾರಿ ಧೃಡ ಸಂಕಲ್ಪ ಮಾಡಿದೆ. ಹಾಗೊಮ್ಮೆ ಸಂಘಟನೆಗಳ ನಿಷೇಧ ಪ್ರಶ್ನಿಸಿ ಕೋರ್ಟ್‌ ಮೊರೆ ಹೊಕ್ಕರೂ ಸಾಕಷ್ಟು ಸಾಕ್ಷ್ಯಗಳನ್ನು ಹೊಂದಿರಬೇಕು ಎಂಬ ಕಾರಣಕ್ಕಾಗಿ ಪೊಲೀಸ್‌ ಇಲಾಖೆ ತಲೆಕೆಡಿಸಿಕೊಂಡಿದೆ. ರಾಜ್ಯ ಸಚಿವ ಸಂಪುಟದ ಮುಂದಿನ ಸಭೆಯಲ್ಲಿಯೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದೂ ಮೂಲಗಳು ತಿಳಿಸಿವೆ.

ಕೆಎಫ್‌ಡಿ ಸಂಘಟನೆಗೆ ಸೇರಿದ 6 ಮಂದಿ ಯುವಕರು ಹುಣಸೂರಿನ ಸುಧೀಂದ್ರ ಮತ್ತು ವಿಘ್ನೇಶ್ ಎಂಬ ವಿದ್ಯಾರ್ಥಿಗಳನ್ನು ಹಣಕ್ಕಾಗಿ ಅಪಹರಿಸಿ, ಬರ್ಬರವಾಗಿ ಹತ್ಯೆ ಮಾಡಿ ಸಿಕ್ಕಿಬಿದ್ದ ನಂತರ ರಾಜ್ಯ ಸರಕಾರ ಜಾಗೃತಗೊಂಡಿದೆ. ಪೊಲೀಸ್‌ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿ ಕೆಎಫ್‌ಡಿ, ಪಿಎಫ್‌ಐ ಸಂಘಟನೆ ಬಗೆಗಿನ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ ತಕ್ಷಣ ಸರಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶಿಸಿದೆ.

ಕೆಎಫ್‌ಡಿ ಮತ್ತು ಪಿಎಫ್‌ಐ ಸಂಘಟನೆಗಳು ಹೆಚ್ಚು ಕ್ರಿಯಾಶೀಲವಾಗಿರುವ ಮೈಸೂರು, ಮಂಗಳೂರು ಜಿಲ್ಲೆಗಳ ಪೊಲೀಸ್‌ ಆಯುಕ್ತರು ಹಾಗೂ ಜಿಲ್ಲಾ ಎಸ್‌ಪಿಗಳಿಗೆ ಗೃಹ ಸಚಿವಾಲಯದಿಂದ ಇಂಥದ್ದೊಂದು ಸೂಚನೆ ಬಂದಿದೆ.

ಅಂದರೆ ಇನ್ನು ಒಂದು ತಿಂಗಳ ಒಳಗಾಗಿ ಸಮಾಜಘಾತುಕ ಮತ್ತು ವಿಚ್ಛಿದ್ರಕಾರಿ ಸಂಘಟನೆಗಳ ಪಟ್ಟಿಗೆ ಕೆಎಫ್‌ಡಿ ಮತ್ತು ಪಿಎಫ್‌ಐ ಸಂಘಟನೆಗಳನ್ನು ಸೇರಿಸಬೇಕೆಂಬುದು ಸರಕಾರದ ಆಲೋಚನೆ. ಅದಕ್ಕಾಗಿ ಎರಡೂ ಸಂಘಟನೆಗಳ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲು ತೀವ್ರ ತಯಾರಿ ನಡೆಯುತ್ತಿದೆ.

ಮೈಸೂರಿನಲ್ಲಂತೂ ಸಿಸಿಬಿ ಪೊಲೀಸರು ಕಳೆದ ನಾಲ್ಕು ದಿನಗಳಿಂದ ಕೆಎಫ್‌ಡಿ ಮತ್ತು ಪಿಎಫ್‌ಐ ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದವರ ಎಲ್ಲ ಪ್ರಕರಣಗಳಿಗೆ ಮರು ಜೀವ ಕೊಟ್ಟಿದ್ದಾರೆ. 2009ರಲ್ಲಿ ಮೈಸೂರು ನಗರವನ್ನು ತಲ್ಲಣಗೊಳಿಸಿದ್ದ ಕ್ಯಾತಮಾರನಹಳ್ಳಿ ಕೋಮುಗಲಭೆಯಲ್ಲಿ ಕೆಎಫ್‌ಡಿ ಹಾಗೂ ಪಿಎಫ್‌ಐ ಸಂಘಟನೆಯ ಕೆಲವರು ವಹಿಸಿದ ಪಾತ್ರವೇನು ಎಂಬ ಅಂಶಗಳ ಬಗ್ಗೆ ವಿವರ ಸಂಗ್ರಹಿಸುತ್ತಿದ್ದಾರೆ. ಅಲ್ಲದೆ 2009ರಲ್ಲೇ ಪಿಎಫ್‌ಐ ಕರೆ ಕೊಟ್ಟಿದ್ದ ಜೈಲ್‌ ಭರೋ ವೇಳೆ ಪೊಲೀಸರು ಹಾಗೂ ಸಂಘಟನೆ ಕಾರ್ಯಕರ್ತರ ಮಧ್ಯೆ ನಡೆದಿದ್ದ ಘರ್ಷಣೆಯಲ್ಲಿ ಸಿಕ್ಕಿಬಿದ್ದ ಆರೋಪಿಗಳೆಲ್ಲರ ಮರು ವಿಚಾರಣೆಯೂ ನಡೆಯುತ್ತಿದೆ.

ವಿಶೇಷವಾಗಿ ಕೆಎಫ್‌ಡಿ, ಪಿಎಫ್‌ಐ ಸಂಘಟನೆಗಳ ಎಲ್ಲ ಚಟುವಟಿಕೆಗಳಲ್ಲಿ ಸದಾ ಕಾಲ ಭಾಗಿಯಾಗುತ್ತಿದ್ದ ಯುವಕರ ಪಡೆ ಮೇಲೆ ಪೊಲೀಸರ ಕಣ್ಣು ಬಿದ್ದಿದೆ. ಕೆಎಫ್‌ಡಿ ಮತ್ತು ಪಿಎಫ್‌ಐ ಸಂಘಟನೆಗಳು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಆಯೋಜಿಸಿದ್ದ ಎಲ್ಲ ಕಾರ್ಯಕ್ರಮಗಳ ಬಗ್ಗೆ ಪೊಲೀಸರೇ ತೆಗೆಸಿದ್ದ ವೀಡಿಯೋ ಚಿತ್ರೀಕರಣ ಮತ್ತು ಫೋಟೋಗಳನ್ನು ಮರು ಪರಿಶೀಲಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

ಕರ್ನಾಟಕ ಫೋರಂ ಡಿಗ್ನಿಟಿ (ಕೆಎಫ್‌ಡಿ) 2007ರಲ್ಲೇ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯೊಂದಿಗೆ ವಿಲೀನವಾಯಿತು ಎಂದು ಇತ್ತೀಚೆಗಷ್ಟೇ ಪಿಎಫ್‌ಐ ಸಂಚಾಲಕರು ಅಧಿಕೃತವಾಗಿ ಹೇಳಿದ್ದಾರೆ.

ಮಂಗಳೂರು ವರದಿ: ಸಮಾಜ ವಿದ್ರೋಹಿ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿರುವ ಕೆಡಿಎಫ್ ಸಂಘಟನೆಯನ್ನು ನಿಷೇಧಿಸುವ ಸಂಬಂಧ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರವನ್ನು ಕರ್ನಾಟಕ ಅಲ್ಪಸಂಖ್ಯಾತರ ಆಯೋಗ ಸ್ವಾಗತಿಸಲಿದೆ ಎಂದು ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಶನಿವಾರ ಹೇಳಿದರು.

English summary
KFD- PFI on verge of ban in Karnataka. Thanks to Hunsur students killings KFD- PFI may be banned shortly in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X