ಇಷ್ಟಕ್ಕೂ ಯಡಿಯೂರಪ್ಪ ಕೊಟ್ಟಕಲ್ ಆಸ್ಪತ್ರೆಗೆ ತೆರಳಿದ್ದೇಕೆ?

ಫ್ಲಾಷ್ ಬ್ಯಾಕ್: ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ದೆಹಲಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕಳೆದ ವಾರ ಗುಡುಗಿದ್ದರು. ಇದರಿಂದ ವಿಚಲಿತರಾದ ಯಡಿಯೂರಪ್ಪನವರು ತಮ್ಮ ಪರಮಾಪ್ತ, ಮೇಲ್ಮನೆ ಸದಸ್ಯ ಲೆಹರ್ ಸಿಂಗ್ ಮೂಲಕ ಎಚ್.ಡಿ.ಕೆ ಅವರನ್ನು ಸಂಧಾನಕ್ಕೆ ಆಹ್ವಾನ ನೀಡಿದರು.
ಆದರೆ ಎಚ್.ಡಿ.ಕೆ, ಲೆಹರ್ ಮಾತಿಗೆ ಸೊಪ್ಪು ಹಾಕಿಲ್ಲ. ಎಚ್.ಡಿ.ಕೆ. ತಮ್ಮ ಅಂಕುಶಕ್ಕೆ ಸಿಗುತ್ತಿಲ್ಲ ಎಂಬುದನ್ನು ಮನದಟ್ಟುಪಡಿಸಿಕೊಂಡ ಯಡಿಯೂರಪ್ಪ, ಗುಪ್ತಚರ ಇಲಾಖೆಯನ್ನು ಅವರತ್ತ ಛೂಬಿಟ್ಟರು. ಅದರಂತೆ ಬೇಹು ಮೂಲಗಳು 'ಎಚ್. ಡಿ. ಕುಮಾರಸ್ವಾಮಿ ಅವರು ಜೂನ್ 12ರಂದು ಕೊಟ್ಟಕಲ್ ಆಸ್ಪತ್ರೆಯಲ್ಲಿ ರೂಮ್ ಬುಕ್ ಮಾಡಿಸಿದ್ದಾರೆ' ಎಂಬ ಮಾಹಿತಿ ಖಚಿತಪಡಿಸಿದರು.
'ಸರಿ, ನಾನೂ ಹೊರಟೆ ಕೊಟ್ಟಕಲ್ ಗೆ' ಎಂದವರೇ ಯಡಿಯೂರಪ್ಪ ಹುಬ್ಬಳಿಯಿಂದಲೇ ನೇರವಾಗಿ ವಿಶೇಷ ವಿಮಾನದಲ್ಲಿ ಕೊಟ್ಟಕಲ್ ಆಸ್ಪತ್ರೆಗೆ ತೆರಳಿದರು. ಆದರೆ ಧಣಿಯನ್ನು ಸಂಪ್ರೀತಗೊಳಿಸುವ ಭರದಲ್ಲಿ ಲೆಹರ್ ಸಿಂಗ್ ಯಡವಟ್ಟು ಕೆಲಸ ಮಾಡಿದರು. ಕುಮಾರಸ್ವಾಮಿಗೆ ಸೀದಾ ಫೋನಾಯಿಸಿದವರೆ, ನೀವು ಹೋಗುತ್ತಿರುವ ಕೊಟ್ಟಕಲ್ ಆಸ್ಪತ್ರೆಗೆ ಮುಖ್ಯಮಂತ್ರಿ ಸಾಹೇಬರೂ ಬರುತ್ತಿದ್ದಾರೆ. ಅಲ್ಲೇ ಕೂತು ಮಾತ್ನಾಡೋಣ. ನಾನೂ ಬರ್ತಿದ್ದೀನಿ' ಎಂದು ಉಸುರಿದರು.
ಆದರೆ ಇತ್ತ, ಯಾವುದೇ ಕಾರಣಕ್ಕೂ ಯಡಿಯೂರಪ್ಪ ಜತೆ ಕೈಜೋಡಿಸಬಾರದು ಎಂದು ದೊಡ್ಡಗೌಡರಿಂದ ಆಣತಿ ಪಡೆದಿದ್ದ 'ಕುಮಾರ'ಸ್ವಾಮಿ 'ಕೊಟ್ಟಕಲ್ ಸ್ಟೆ ಕ್ಯಾನ್ಸಲ್' ಎಂದರು. ಪಾಪ ಪಾಂಡು ಈಗ ನಿಜಕ್ಕೂ ಚಿಕಿತ್ಸೆ ಪಡೆಯುತ್ತಿದ್ದಾರೆ.











Click it and Unblock the Notifications