ಸೋಮವಾರಪೇಟೆಯಲ್ಲಿ ಅತ್ತೆ ಮೇಲೆ ಅಳಿಯ ಅತ್ಯಾಚಾರ

ಘಟನೆಯ ವಿವರ: ಸೂರ್ಲಬ್ಬಿ ಗ್ರಾಮದ ಪಳಂಗಪ್ಪ ಎಂಬುವರ ಪತ್ನಿ ಮಾಚಮ್ಮ ಎಂಬುವರೇ ತನ್ನ ಅಳಿಯ (ಮಗಳ ಗಂಡ)ನಿಂದ ಅತ್ಯಾಚಾರಕ್ಕೊಳಗಾದ ಮಹಿಳೆ. ಇವರ ಪತಿ ಪಳಂಗಪ್ಪ ಎಂಬುವರು ಪತ್ನಿಯಿಂದ ದೂರವಾಗಿ ಕುಶಾಲನಗರದಲ್ಲಿ ನೆಲೆಸಿದ್ದಾರೆ. ಹಾಗಾಗಿ ಮಾಚಮ್ಮ ಒಬ್ಬಂಟಿಯಾಗಿ ತಮ್ಮ ಗ್ರಾಮವಾದ ಸೂರ್ಲಬ್ಬಿಯಲ್ಲಿ ನೆಲೆಸಿದ್ದರು. ಇವರ ಹಿರಿಯ ಮಗಳನ್ನು ಬೋಪಯ್ಯ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆದರೆ ಅಳಿಯ ಬೋಪಯ್ಯ ಆಗಾಗ್ಗೆ ಸೂರ್ಲಬ್ಬಿಯಲ್ಲಿರುವ ತನ್ನ ಮನೆಗೆ ಭೇಟಿ ನೀಡುತ್ತಿದ್ದನು.
ಆದರೆ ಇತ್ತೀಚೆಗೆ ರಾತ್ರಿ ಸುಮಾರು ಒಂಬತ್ತು ಗಂಟೆಯ ವೇಳೆಗೆ ಸೂರ್ಲಬ್ಬಿಯ ಮಾಚಮ್ಮನವರ ಮನೆಗೆ ಗೆಳೆಯ ಭರತ್ ಎಂಬಾತನೊಂದಿಗೆ ತೆರಳಿದ ಬೋಪಯ್ಯ ಬಾಗಿಲು ಬಡಿದು ತೆರೆಯುವಂತೆ ಅತ್ತೆಗೆ ಹೇಳಿದ್ದಾನೆ. ಆದರೆ ಅಳಿಯ ಕುಡಿದು ಬಂದಿರುವುದನ್ನು ತಿಳಿದ ಮಾಚಮ್ಮ ಬಾಗಿಲು ತೆರೆಯದಿದ್ದಾಗ ಬಾಗಿಲು ಮುರಿದು ಒಳನುಗ್ಗಿದ್ದಲ್ಲದೆ, ಅವರಿಗೆ ಥಳಿಸಿ ಬಳಿಕ ಇಬ್ಬರು ಅತ್ಯಾಚಾರ ಎಸಗಿದ್ದಾರೆ. ಹೇಗೋ ಅವರಿಂದ ತಪ್ಪಿಸಿಕೊಂಡು ಹೊರಬಂದ ಮಾಚಮ್ಮ ಅವರನ್ನು ಜೀವಂತ ಬಿಟ್ಟರೆ ತಮಗೆ ಕಷ್ಟ ಎಂದರಿತ ಇಬ್ಬರು ಆಕೆಯನ್ನು ಕೊಲೆಗೈಯ್ಯಲು ಮುಂದಾಗಿದ್ದಾರೆ ಈ ಸಂದರ್ಭ ಬೋಪಯ್ಯನ ಗೆಳೆಯ ಭರತ್ ಎಂಬಾತ ಕತ್ತಿಯಿಂದ ಮಾಚಮ್ಮನನ್ನು ಕಡಿಯಲು ಮುಂದಾಗಿದ್ದು ಆಕೆ ತಪ್ಪಿಸಿಕೊಂಡ ಪರಿಣಾಮ ಅದು ಅಳಿಯ ಬೋಪಯ್ಯನಿಗೆ ತಾಗಿದೆ.
ಮನೆ ಧ್ವಂಸ: ಮದ್ಯದ ಅಮಲಿನಲ್ಲಿದ್ದ ಅವರಿಬ್ಬರು ಬಳಿಕ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‌ಗೆ ಬೆಂಕಿ ಹಚ್ಚಿದ್ದಾರೆ ಇದರಿಂದ ಸಿಲಿಂಡರ್ ಸ್ಪೋಟಗೊಂಡು ಮನೆ ನೆಲಕ್ಕುರುಳಿದೆ. ಅತ್ಯಾಚಾರಕ್ಕೊಳಗಾದ ಮಾಚಮ್ಮ ಸೋಮವಾರಪೇಟೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದು, ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಮತ್ತೊಂದೆಡೆ ಅಳಿಯ ಬೋಪಯ್ಯನ ಕೈಗೆ ಗಂಭೀರ ಗಾಯಗಳಾಗಿದ್ದು ಆತ ಸೋಮವಾರಪೇಟೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ. ಆದರೆ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಬಂದೋಬಸ್ತ್‌ನಲ್ಲಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಆಸ್ಪತ್ರೆಗೆ ಕರೆತರಲಾಗಿದೆ. ಈ ನಡುವೆ ಮತ್ತೊಬ್ಬ ಆರೋಪಿ ಭರತ್ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.












Click it and Unblock the Notifications