ಕರ್ನಾಟಕ ಬುಲ್ಡೋಜರ್ ಗೆ ಸಿಕ್ಕಿ ಮುಂಬೈ ಅಪ್ಪಚ್ಚಿ!

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 20 ಓವರ್ ಗಳಲ್ಲಿ ನಾಲ್ಕು ವಿಕೇಟ್ ಪಡೆದು 158 ರನ್ ಕಲೆಹಾಕಿತ್ತು. ಆದರೆ ಬುಲ್ಡೋಜರ್ ತಂಡದ ಧ್ರವಶರ್ಮ ಅರ್ಧಶತಕ ಮತ್ತು ತಂಡದ ನಾಯಕ ಸುದೀಪ್ ಅವರ ಅಮೋಘ ಆಟಕ್ಕೆ ಮುಂಬೈ ತಲೆಬಾಗಲೇಬೇಕಾಯಿತು.
ಕರ್ನಾಟಕ ಬುಲ್ಡೋಜರ್ಸ್ ತಂಡವು 18.1 ಓವರ್ ಗಳಲ್ಲಿ ಕೇವಲ ಮೂರು ವಿಕೇಟ್ ಒಪ್ಪಿಸಿ 159 ರನ್ ಗಳಿಸಿ ಏಳು ವಿಕೇಟ್ ಗಳ ಗೆಲುವನ್ನು ತನ್ನದಾಗಿಸಿಕೊಂಡಿತ್ತು. ಈ ಮೂಲಕ ಕರ್ನಾಟಕ ತಂಡವನ್ನು ಸೋಲಿಸುತ್ತೇವೆ ಎಂದು ಕೊಚ್ಚಿಕೊಂಡಿದ್ದ ಕನ್ನಡಿಗ ಮುಂಬೈ ಹೀರೋಸ್ ನ ಸುನೀಲ್ ಶೆಟ್ಟಿ ಸೋಲೊಪ್ಪಿಕೊಂಡರು.
ಮೊದಲು ಫೀಲ್ಡಿಂಗ್ ಆಯ್ದುಕೊಂಡ ಕಿಚ್ಚ ಸುದೀಪ್ ತಂಡ ಆರಂಭದಲ್ಲಿಯೇ ಎದುರಾಳಿಗೆ ತೀವ್ರ ಪೈಪೋಟಿಯನ್ನು ನೀಡಿತ್ತು. ಮೊದಲ ಓವರ್ ಗೆ ಕೇವಲ ಎರಡು ರನ್ ಗೆ ಬಾಲಿವುಡ್ ನಟ ಅರ್ಬಾಜ್ ಖಾನ್ ಔಟಾದರು.
ಮುಂಬೈ ತಂಡದ ಕೆಲವು ಆಟಗಾರರು ಉತ್ತಮವಾಗಿ ಆಡಿ ಪೈಪೋಟಿ ನೀಡಲು ಪ್ರಯತ್ನಿಸಿದರು. ರಾಜಾ 46 ರನ್ ಪಡೆದರೆ, ರಿತೀಶ್ ದೇಶ್ಮುಖ್ 35 ರನ್ ಗಳಿಸಿ ಒಟ್ಟು 157 ರನ್ ಪಡೆಯಲು ನೆರವಾದರು.
ಕರ್ನಾಟಕ ಬುಲ್ಡೋಜರ್ಸ್ ನ ದಿಗಂತ್, ಮಹೇಶ್, ಶಂಕರೇಗೌಡ ಮತ್ತು ಅಭಿಮನ್ಯು ತಲಾ ಒಂದೊಂದು ವಿಕೇಟ್ ಉರುಳಿಸಿ ತಂಡದ ಗೆಲುವಿಗೆ ಕಾರಣವಾದರು.
ಸಿನಿಮಾ ತಾರೆಯರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು. ಲೀಗ್ ನಲ್ಲಿ ಭಾಗವಹಿಸುವ ತಂಡಗಳ ಪಥ ಸಂಚಲನ, ಮೆಚ್ಚಿನ ನಟನಟಿಯರನ್ನು ನೋಡಿ ಜನರು ಹರ್ಷೋದ್ಗಾರ ಮಾಡಿದರು.












Click it and Unblock the Notifications