ಸಚಿವ ಸೋಮಣ್ಣ ಪುತ್ರರಿಂದಲೂ ಅಕ್ರಮ ಗಣಿಗಾರಿಕೆ

ಮಾತಾ ಮಿನರಲ್ಸ್ ತನ್ನ ಗುತ್ತಿಗೆ ಪ್ರದೇಶದ ಸುತ್ತಲಿನ 37.30 ಎಕರೆ ಪ್ರದೇಶವನ್ನು ಅತಿಕ್ರಮಣ ಮಾಡಿ ಗಣಿಗಾರಿಕೆ ನಡೆಸಿರುವುದು ಕಳೆದ ಆಗಸ್ಟ್‌ನಲ್ಲೇ ಪತ್ತೆಯಾಗಿತ್ತು. ಆದರೆ ಸರ್ಕಾರದ ಅಧಿಕಾರಿಗಳ ಸಹಕಾರದಿಂದ ಪ್ರಕರಣ ಮುಚ್ಚಿಹೋಗುವ ಹಂತ ತಲುಪಿತ್ತು. ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥರಾಗಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಯು.ವಿ.ಸಿಂಗ್ ಈ ಕುರಿತು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಸೋಮಣ್ಣ ಅವರ ಪುತ್ರರಾದ ಅರುಣ್ ಸೋಮಣ್ಣ, ನವೀನ್ ಸೋಮಣ್ಣ ಮತ್ತಿತರರು ಪಾಲುದಾರರಾಗಿ ಮಾತಾ ಮಿನರಲ್ಸ್ ಎಂಬ ಗಣಿ ಕಂಪನಿ ನಡೆಸುತ್ತಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಪುಟ್ಟರಾಜು ಕೂಡ ಹಿಂದೆ ಈ ಕಂಪನಿಯ ಪಾಲುದಾರರಲ್ಲಿ ಒಬ್ಬರಾಗಿದ್ದರು. ಗುಬ್ಬಿ ತಾಲ್ಲೂಕಿನ ಕೊಂಡ್ಲಿ ಮತ್ತು ಮೂಡಲಪಾಳ್ಯ ಗ್ರಾಮಗಳ ವ್ಯಾಪ್ತಿಯಲ್ಲಿ 320 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಈ ಕಂಪನಿಗೆ ಗಣಿ ಗುತ್ತಿಗೆ (ಸಂಖ್ಯೆ 2600) ನೀಡಲಾಗಿತ್ತು.
ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರ ಅರಣ್ಯ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಜಂಟಿ ಕಾರ್ಯಪಡೆಗೆ ಕಳೆದ ವರ್ಷ ಸೂಚನೆ ನೀಡಿತ್ತು. ಸರ್ಕಾರದ ನಿರ್ದೇಶನದಂತೆ ಈ ಇಲಾಖೆಗಳ ಅಧಿಕಾರಿಗಳು ಕಳೆದ ಆಗಸ್ಟ್‌ನಲ್ಲಿ ಮಾತಾ ಮಿನರಲ್ಸ್ ಕಂಪನಿಯ ಗುತ್ತಿಗೆ ಪ್ರದೇಶಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿದ್ದರು.
ದಂಡ ಪಾವತಿಸುವಂತೆ ಮಾರ್ಚ್ 26ರಂದು ಎರಡು ನೋಟಿಸ್‌ಗಳನ್ನು ಕಂಪನಿಯ ಬೆಂಗಳೂರು ವಿಳಾಸಕ್ಕೆ ರವಾನಿಸಲಾಗಿತ್ತು. ದಂಡ ಪಾವತಿಗೆ ಒಂದು ತಿಂಗಳ ಗಡುವು ವಿಧಿಸಲಾಗಿತ್ತು. ಆದರೆ ಎರಡು ತಿಂಗಳು ಕಳೆದರೂ ಕಂಪನಿ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.












Click it and Unblock the Notifications