ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೆ ತೊರೆಕಾಡನಹಳ್ಳಿಯಿಂದ ನೀರು ಪೂರೈಕೆ

By Prasad
|
Google Oneindia Kannada News

Katta Subramanya Naidu
ಬೆಂಗಳೂರು, ಮೇ. 03 : ಜಲಧಿ ಸೇರುತ್ತಿರುವ ನದಿಗಳಂತೆ ಬೆಂಗಳೂರು ನಗರಕ್ಕೆ ಬರುತ್ತಿರುವ ಕಾಸ್ಮೋಪಾಲಿಟನ್ ಸಂಸ್ಕೃತಿಯ ಜನರ ದಾಹ ತಣಿಸಲು ರಾಜ್ಯ ಸರಕಾರ ಹರಸಾಹಸಪಡುತ್ತಿದೆ. ಕಾವೇರಿ ನೀರು ನಗರದ ಎಲ್ಲೆಡೆ ತಲುಪುತ್ತಿಲ್ಲ. ತಿಪ್ಪಗೊಂಡನಹಳ್ಳಿ ಬಟ್ಟ ಬರಿದಾಗಿದೆ. ಇರುವ ಕೆರೆಕಟ್ಟೆಗಳೂ ಒಣಗಿರುವುದರಿಂದ ಅಂತರ್ಜಲ ಕುಸಿದು ಬೋರ್ ವೆಲ್ಲುಗಳು ಕೂಡ ಬರೀ ಗಾಳಿ ಹೊರಹಾಕುತ್ತಿವೆ.

ಇದನ್ನು ಮನಗಂಡಿರುವ ಸರಕಾರ ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿ ಜಲಾಶಯದಿಂದ 500 ಎಮ್ಎಲ್ ಡಿ ನೀರನ್ನು ನಗರಕ್ಕೆ ಪೂರೈಸುವ ಯೋಜನೆಯನ್ನು ಸರಕಾರ ಹಾಕಿಕೊಂಡಿದ್ದು, ಇದರಿಂದ ತುಸುಮಟ್ಟಿಗಾದರೂ ನೀರಿಗಾಗಿ ಹಾಹಾಕಾರ ನಿಲ್ಲುವುದೆಂಬ ಆಶಯವಿದೆ ಎಂದು ಭೂ ಹಗರಣದ ಆರೋಪ ಹೊತ್ತಿರುವ ಮಾಜಿ ಐಟಿಬಿಟಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಮಂಗಳವಾರ ಹೇಳಿದ್ದಾರೆ.

ನಗರದ ಕಾವಲ್ ಭೈರಸಂದ್ರ ವಾರ್ಡ್ ನಲ್ಲಿ ಕೆಂಪೇಗೌಡ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ತೊರೆಕಾಡನಹಳ್ಳಿ ಜಲಾಶಯದಿಂದ ನೀರು ತರುವುದರ ಜೊತೆಗೆ ಕೃಷ್ಣಾ ಮತ್ತು ನೇತ್ರಾವತಿ ನದಿ ತಿರುವು ಯೋಜನೆಗಳಿಂದಲೂ ನಗರಕ್ಕೆ ನೀರನ್ನು ಹರಿಸುವ ಪ್ರಯತ್ನ ನಡೆಯುತ್ತಿದೆ ಎಂದು ನುಡಿದರು. ಇದಕ್ಕಾಗಿ ಬಿಡಿಎ ಮತ್ತು ಬಿಬಿಎಂಪಿಗಳು ಕೊಟ್ಯಂತರ ರು. ವೆಚ್ಚ ಮಾಡುತ್ತಿವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಸಂಸದ ಡಿಬಿ ಚಂದ್ರೇಗೌಡ ಅವರು, ಕೆಂಪೇಗೌಡರು ಬೆಂಗಳೂರಿನಲ್ಲಿ ನಿರ್ಮಿಸಿದ್ದ 130 ಕೆರೆಗಳಲ್ಲಿ ಇಂದು ಬೆರಳೆಣಿಕೆಯ ಕೆರೆಗಳು ಮಾತ್ರ ಇವೆ. ಉಳಿದವು ಬರಿದಾಗಿವೆ, ಇಲ್ಲ ಕಬಳಿಸಲ್ಪಟ್ಟಿವೆ. ಇದರಿಂದಾಗಿ ಅಂತರ್ಜಲದ ಮಟ್ಟ ಬೆಂಗಳೂರಿನಲ್ಲಿ ಭಾರೀ ಕುಸಿದಿದೆ. ಇರುವ ಕೆರೆಗಳನ್ನಾದರೂ ಕಾಪಾಡುತ್ತೇವೆಂಬ ಪ್ರತಿಜ್ಞೆಯನ್ನು ಜನರೇ ಮಾಡಬೇಕು ಎಂದು ಅವರು ಕೋರಿದರು.

ಟ್ಯಾಂಕರ್ ಗಳಿಂದ ನೀರು : ನೀರಿನ ಸರಿಯಾದ ಪೂರೈಕೆಯಿಲ್ಲದ ಬಡಾವಣೆಗಳಲ್ಲಿ ಟ್ಯಾಂಕರ್ ಗಳಿಂದ ನೀರು ಹಾಕಿಸಿಕೊಳ್ಳುವುದು ಸಾಮಾನ್ಯವಾಗಿದೆ. ಟ್ಯಾಂಕರ್ ನೀರಿಗೆ 250ರಿಂದ 300 ರು.ನಷ್ಟು ಹಣ ಕೀಳಲಾಗುತ್ತಿದೆ. ಕೇಳಿದಷ್ಟು ಹಣ ಪೀಕದೆ ಬೇರೆ ವಿಧಿಯೇ ಇಲ್ಲ ಎಂದು ಜನರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದೆಲ್ಲದರ ಜೊತೆಗೆ ಮಳೆನೀರು ಕೊಯ್ಲು ಮಾಡಿಸಲು ಜನರು ಹಿಂದೇಟು ಹಾಕುತ್ತಿರುವುದು ನೀರಿನ ಬವಣೆಯನ್ನು ಇನ್ನಷ್ಟು ಹೆಚ್ಚಿಸಿದೆ.

English summary
To reduce the water woes of Bangalore people Karnataka govt has decided to get water from Torekadanahalli reservoir in Mandya district. Bangalore is facing acute shortage of drinking water due to excessive influx of people from outside. The solution is to preserve tanks and embrace water harvesting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X