ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತನನ್ನು ಯೋಗಿಯನ್ನಾಗಿ ಮಾಡಿದ್ದೇ ಕುವೆಂಪು

By Prasad
|
Google Oneindia Kannada News

National seminar on Kuvempu
ನವದೆಹಲಿ, ಏ. 16 : ಕನ್ನಡ ಸಾಹಿತ್ಯದ ಒಂದೂವರೆ ಸಾವಿರ ವರ್ಷಗಳ ಸುದೀರ್ಘ ಇತಿಸಾಹದಲ್ಲಿ ಕುವೆಂಪು ಅವರಿಗೆ ವಿಶಿಷ್ಟವಾದ ಸ್ಥಾನವಿರುವುದಕ್ಕೆ ಕಾರಣ ಅವರು ಕವಿಯಾಗಿ-ದಾರ್ಶನಿಕರಾಗಿ ಮಹತ್ತರವಾದುದನ್ನು ಸಾಧಿಸಿದ್ದು ಎಂದು ಹಿರಿಯ ಸಾಹಿತಿ ಡಾ. ಪ್ರಭುಶಂಕರ ಅವರು ಬಣ್ಣಿಸಿದ್ದಾರೆ.

ರಾಷ್ಟ್ರದ ರಾಜಧಾನಿಯಲ್ಲಿ 'ಕುವೆಂಪು ಸಮಗ್ರ ನೋಟ' ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏ.15ರಂದು ಉದ್ಘಾಟನೆ ಮಾಡಿದ ನಂತರ ಮಾತನಾಡುತ್ತಿದ್ದ ಅವರು, ಕುವೆಂಪು ಅವರು ತಮ್ಮ ಸೃಜನಶೀಲತೆಯನ್ನು ಸಾಮಾಜಿಕ ಪರಿವರ್ತನೆಗೂ ವಿನಿಯೋಗಿಸಿದ್ದಾರೆ. ಇಂಥ ಮಹಾಪುರುಷರ ಸಾನಿಧ್ಯ ತಮಗೆ ದೊರೆತದ್ದು ತಮ್ಮ ಪುಣ್ಯ ಎಂದು ಅವರು ಅಭಿಮಾನದಿಂದ ಹೇಳಿದರು.

ಹದಿಮೂರು ವರ್ಷಗಳ ಕಾಲ ರಾಮಕೃಷ್ಣಾಶ್ರಮದಲ್ಲಿ ಪರಮಹಂಸರ ಶಿಷ್ಯರಾಗಿ, ಅವರ ಉಪದೇಶಗಳನ್ನು, ಆಧ್ಯಾತ್ಮದ ಅನುಭವಗಳನ್ನು ಸ್ವೀಕರಿಸಿಕೊಂಡು ಕನ್ನಡಿಗರಿಗೆ ವಿಪುಲ ಸಾಹಿತ್ಯವನ್ನು ನೀಡಿದ ಕುವೆಂಪು ಜಗತ್ತಿನ ಅನೇಕ ಮಹಾಪುರುಷರ ಚರಿತ್ರೆಯಲ್ಲಿ ಮೇರು ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಸತ್ ಸದಸ್ಯ ಮತ್ತು ಕುವೆಂಪು ಪ್ರತಿಷ್ಠಾನದ ಸ್ಥಾಪಕ ಸದಸ್ಯರಾಗಿರುವ ಡಿಬಿ ಚಂದ್ರೇಗೌಡ ಅವರು, ನೇಗಿಲನ್ನು ಉಳುವ ರೈತನನ್ನು ಯೋಗಿಯನ್ನಾಗಿ ಮಾಡಿದ ಮತ್ತೊಬ್ಬ ಕವಿಯನ್ನು ನಾನೆಲ್ಲೂ ಕಂಡಿಲ್ಲ. ಮನುಜ ಮತ, ವಿಶ್ವ ಪಥ ಎಂದು ಸಾರಿದ ವಿಶ್ವಮಾನವ ಕುವೆಂಪು ಅವರು ಕನ್ನಡಿಗರಷ್ಟೇ ಅಲ್ಲ ರಾಷ್ಟ್ರೀಯ ಜನನಾಯಕರು ಕೂಡಾ ಹೌದು, ಅವರನ್ನು ಜನ ಸಾಮಾನ್ಯರು ಕೂಡ ಗುರುತಿಸಿದ್ದಾರೆ. ಸಮನ್ವಯವನ್ನು ಸಾಧಿಸಿದ ಮಹಾನ್ ಕವಿ ಜನಮಾನಸದಲ್ಲಿ ಆಳವಾಗಿ ಬೇರೂರಿದ್ದಾರೆ. ವಾರಣಾಸಿಯಲ್ಲಿ ತುಳಸಿ ರಾಮಾಯಣ ದರ್ಶನ ಭವನ ಇರುವಂತೆ ಕರ್ನಾಟಕದಲ್ಲೂ ಶ್ರೀ ರಾಮಾಯಣ ದರ್ಶನ ಭವನ ಮಾಡಬೇಕಾಗಿದೆ ಎಂಬ ವಿಚಾರವನ್ನು ವ್ಯಕ್ತಪಡಿಸುತ್ತಾ, ಕುವೆಂಪು ಪ್ರತಿಷ್ಠಾನ, ಭಾಷಾಭಾರತಿ ನಡೆದು ಬಂದ ಹಾದಿ, ಸ್ಥಾಪನೆ, ಧ್ಯೇಯೋದ್ದೇಶಗಳ ಕುರಿತು ವಿವರಿಸಿದರು.

ಉದ್ಘಾಟನಾ ಸಮಾರಂಭದ ವಿದ್ವಾಂಸರನ್ನು ಕಡಿದಾಳ್ ಪ್ರಕಾಶ್ ಸ್ವಾಗತಿಸಿದರು. ಕುಪ್ಪಳಿ ಕನ್ನಡ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಡಾ. ಹಿ.ಚಿ. ಬೋರಲಿಂಗಯ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎ. ಮುರಿಗೆಪ್ಪ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ. ವೆಂಕಟಾಚಲ ಹೆಗಡೆ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ಹಂಪನಾ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ. ಎಂ.ಎಚ್. ಕೃಷ್ಣಯ್ಯ, ಕುವೆಂಫು ಭಾಷಾಭಾರತಿ ಅಧ್ಯಕ್ಷ ಪ್ರೊ. ಪ್ರಧಾನ ಗುರುದತ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಡಾ. ಪುರುಷೋತ್ತಮ ಬಿಳಿಮಲೆ ವಿದ್ವಾಂಸರನ್ನು ಪರಿಚಯಿಸುತ್ತಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಇದೇ ಸಮಾರಂಭದಲ್ಲಿ ಕುವೆಂಪು ಕುರಿತಾದ ಸಾಕ್ಷ್ಯಚಿತ್ರ ಹಾಗೂ ರವಿ ಮರೂರ್ ಅವರ ತಂಡದಿಂದ ಕುವೆಂಪು ಗೀತಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

English summary
3 days national seminar on comprehensive work by Kuvempu was organized in New Delhi by Delhi Karnataka Sangha in association with Kuvempu pratishthana, Karnataka sahitya academy, Kuvempu bhasha bharati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X