ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಹೋರಾಟ ಗೆಲ್ಲಲೇ ಬೇಕು, ಅಣ್ಣಾ

By * ಆನಂದ್, ಬನವಾಸಿ ಬಳಗ, ಬೆಂಗಳೂರು
|
Google Oneindia Kannada News

Support Anna Hazare Campaign
ಕಿಸನ್ ಬಾಬುರಾವ್ ಹಜಾರೆ ಎಂಬ ಹೆಸರಿನ ಆ ಹಿರಿಯರು ಭ್ರಷ್ಟಾಚಾರದ ವಿರುದ್ಧದ ಒಂದು ದೊಡ್ಡ ಹೋರಾಟಕ್ಕೆ ಮುನ್ನುಡಿ ಹಾಡಿದ್ದಾರೆ. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ರೆಲೆಗನ್ ಸಿದ್ಧಿ ಎಂಬ ಹಳ್ಳಿಯನ್ನು ಮಾದರಿ ಹಳ್ಳಿಯಾಗಿ ರೂಪಿಸಿ, ತನ್ನಿಡೀ ಬದುಕನ್ನೇ ಸಮಾಜಕ್ಕಾಗಿ ಮೀಸಲಿಟ್ಟ ಈ ಹಿರಿಯರು ದೆಹಲಿಯ ಜಂತರ್ ಮಂತರ್ ಬಳಿ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.

ಭ್ರಷ್ಟಾಚಾರವೆಂಬ ಮಹಾ ಪಿಡುಗು: ಭಾರತದಲ್ಲಿ ದಿನಗಳೆದಂತೆ ಭ್ರಷ್ಟಾಚಾರವೆನ್ನುವುದು ಆಳವಾಗಿ ಬೇರೂರತ್ತಲೇ ಹೋಗುತ್ತಿದೆ. ಈ ರೋಗವು ರಾಜಕಾರಣದ ಮೊಗಸಾಲೆಯನ್ನೂ ಬಿಟ್ಟಿಲ್ಲದಿರುವಾಗ, ನಾಡಿನ ವ್ಯವಸ್ಥೆಗಳನ್ನು ಕಟ್ಟಿ ನಿರ್ವಹಿಸಬೇಕಾದ ಜನಪ್ರತಿನಿಧಿ ಸಭೆಗಳು ಕೂಡಾ ಭ್ರಷ್ಟಾಚಾರವನ್ನು ಇಲ್ಲವಾಗಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ನೋವು ಜನರಲ್ಲಿದೆ. ಇಡೀ ವ್ಯವಸ್ಥೆಯೇ ಭ್ರಷ್ಟಾಚಾರದ ಕ್ಯಾನ್ಸರ್ ತಗುಲಿ ನಲುಗುತ್ತಿರುವಾಗ ಇದಕ್ಕೊಂದು ಮದ್ದು ಬೇಕು ಎಂದು ಜನಾಂದೋಲನ ರೂಪಿಸುವಲ್ಲಿ ಈ ಹಿರಿಯ ಜೀವ ತೊಡಗಿದೆ.

ಜನ್ ಲೋಕಪಾಲ್ ಮಸೂದೆಯನ್ನು ಸರಿಯಾಗಿ ರೂಪಿಸಿ ಜಾರಿಗೊಳಿಸಲು ಪ್ರಧಾನಮಂತ್ರಿಗಳಿಗೆ ಮೊರೆಯಿಡುತ್ತಿದ್ದರೂ ಅದು ಫಲಿಸಲಿಲ್ಲವೆಂದು ಇದೀಗ ಅಣ್ಣಾ ಹಜಾರೆಯವರು ಸಾಯೋವರೆಗೆ ಉಪವಾಸ ಮಾಡುವುದಾಗಿ ಘೋಷಿಸಿ, ಅದರಂತೆ ಇಂದು ಸತ್ಯಾಗ್ರಹ ಆರಂಭಿಸಿದ್ದಾರೆ.

ಲೋಕಪಾಲ ಮಸೂದೆ ಮತ್ತು ಜನ್ ಲೋಕಪಾಲ್ ಮಸೂದೆ
2010ರಲ್ಲಿ ಭಾರತ ಸರ್ಕಾರ ಭ್ರಷ್ಟಾಚಾರ ನಿಯಂತ್ರಣದ ಉದ್ದೇಶದಿಂದ ಲೋಕ್‍ಪಾಲ್ ಮಸೂದೆಯನ್ನು ಜಾರಿಗೊಳಿಸಲು ಮುಂದಾಯಿತು. ಈ ಮಸೂದೆಯಲ್ಲಿದ್ದ ಹಲವಾರು ಕುಂದುಕೊರತೆಗಳು ಭ್ರಷ್ಟಾಚಾರವನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿಲ್ಲವೆಂದು ಅಣ್ಣಾ ಒಂದು ಚಳವಳಿಯನ್ನು ಶುರುಮಾಡಿದರು. ಇದರ ಅಂಗವಾಗಿ "ಭ್ರಷ್ಟಾಚಾರದ ವಿರುದ್ಧ ಭಾರತ" ಎನ್ನುವ ಸಂಘಟನೆ ಸದಸ್ಯರ ಜೊತೆಗೂಡಿ "ಜನ್ ಲೋಕ್‍ಪಾಲ್" ಮಸೂದೆಯನ್ನು ಸಿದ್ಧಪಡಿಸಲಾಯಿತು. ಈ ಮಸೂದೆಯನ್ನು ನ್ಯಾಯಮೂರ್ತಿ ಡಾ. ಸಂತೋಶ್ ಹೆಗ್ಡೆ, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರುಗಳು ಸಿದ್ಧಪಡಿಸಿದ್ದಾರೆ. ಇದರಲ್ಲಿ ಭ್ರಷ್ಟರಿಗೆ ಜೀವಾವಧಿಯಂತಹ ಕಠಿಣ ಶಿಕ್ಷೆಯೂ, ಜನರ ನೇರ ಪಾಲ್ಗೊಳ್ಳುವಿಕೆಯೂ, ಲೋಕಾಯುಕ್ತರ ವ್ಯಾಪ್ತಿಯ ಹೆಚ್ಚಳವೂ ಅಡಗಿದ್ದು ಭ್ರಷ್ಟಾಚಾರ ನಿಯಂತ್ರಣಕ್ಕೆ ಕಡಿವಾಣ ಹಾಕುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ಈ ಮಸೂದೆಯಂತೆ ಲೋಕಪಾಲ್ ಮಸೂದೆ ರೂಪುಗೊಳ್ಳಬೇಕು ಎಂದು ಒತ್ತಾಯಿಸಿ ಅಣ್ಣಾ ಹಜಾರೆ ಈಗ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಅವರನ್ನು ಬೆಂಬಲಿಸಿ ದೇಶಾದ್ಯಂತ ಜನಸಾಮಾನ್ಯರು ದನಿ ಎತ್ತಿದ್ದಾರೆ. ಈ ದನಿ ಮತ್ತಷ್ಟು ಗಟ್ಟಿಯಾಗಿ ಸಂಸತ್ತಿನಲ್ಲಿ ಕುಳಿತವರ ಕಿವಿಗಳನ್ನು, ಕಣ್ಣುಗಳನ್ನು ತೆರೆಸಬೇಕಾಗಿದೆ. ಭ್ರಷ್ಟಾಚಾರದ ವಿರುದ್ಧದ ಈ ಹೋರಾಟದಲ್ಲಿ ನಮ್ಮದೂ ಒಂದು ದನಿ ಇರಲಿ. ಅಣ್ಣಾ ಅವರನ್ನು ಬೆಂಬಲಿಸಿ, ಕೂಡಲೇ ಜನ ಲೋಕಪಾಲ್ ಮಸೂದೆಯನ್ನು ಜಾರಿ ಮಾಡಲು ಮುಂದಾಗುವಂತೆ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸೋಣ.

ನೀವು ಕೈ ಜೋಡಿಸಿ: ಅನುಕೂಲವಿದ್ದವರು ಬೆಂಗಳೂರಿನಲ್ಲೂ ಏಪ್ರಿಲ್ 5ರಿಂದ 10ರವರೆಗೆ ಸ್ವಾತಂತ್ರ್ಯ ಉದ್ಯಾನವನ (Freedom park)ಅಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬಹುದು. ಭ್ರಷ್ಟಾಚಾರ ವಿರುದ್ಧ ಏ.5ರಿಂದ ನಡೆದಿರುವ ಈ ಹೋರಾಟಕ್ಕೆ ಲೋಕ್ ಸತ್ತಾ, ಫಾರ್ವರ್ಡ್ 150, ಬನವಾಸಿ ಬಳಗ, ಪ್ರಜಾ, ಎಸ್ ಎನ್ ಎನ್ ಎ, ಅವಿರತ, ಎಡಿಆರ್, ಸ್ವರಾತ್ಮ, ನಮ್ಮ ಬೆಂಗಳೂರು ಪ್ರತಿಷ್ಠಾನ, ದಕ್ಷ್, ಥರ್ಮಲ್ ಅಂಡ್ ಎ ಕ್ವಾರ್ಟರ್, ಎಂಪವರ್ಡ್ ಬೆಂಗಳೂರು, ಸ್ಮಾರ್ಟ್ ವೋಟ್.ಇನ್, ಐ ಪೇಯ್ಡ್ ಬ್ರೈಬ್, ಐ ವೊಂಟ್ ಗೀವ್/ಟೆಕ್ ಬ್ರೈಬ್, ಯುಎನ್ ಒಡಿಸಿ, ಭ್ರಷ್ಟಾಚಾರ ನಿರ್ಮೂಲನ ಸಮಿತಿ, ಸ್ವಾಮಿ ವಿವೇಕಾನಂದ ಯುವ ಸಂಘ ಮೈಸೂರು, ಡಬ್ಲ್ಯೂ ಎ ವೈಇ, ಯುವ ಬೆಂಗಳೂರು, ಸಾಕು.ಇನ್ ಸೇರಿದಂತೆ ನಗರದ ಅನೇಕ ಸಂಘ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

English summary
ANNA HAZARE Campaign against corruption, This protest and battle should be win. Public should support Anna Hazare and Cental Government should re consider and pass Lokpal and Jan Lokpal bill soon. Corruption should face defeat this time, Come and support the movement at Freedom Park, Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X