ಎಂಟಂಕಿ ಆಟ: ಯುವ್ವಿಯತ್ತ ಎಲ್ಲರ ನೋಟ
ಬೆಂಗಳೂರು, ಮಾ. 22: ಎಲ್ರ ಕಣ್ಣು ಯುವಿ ಮ್ಯಾಗೇ... ಎಂದು ಟೀಂ ಇಂಡಿಯಾದ ಅಭಿಮಾನಿಗಳು ಆಗಲೇ ಕುಣಿಯತೊಡಗಿದ್ದಾರೆ. ಇದಕ್ಕೆ ಸ್ವತಃ ಯುವರಾಜ್ ಸಿಂಗ್ ಸಹ ಹೆಜ್ಜೆ ಹಾಕತೊಡಗಿದ್ದಾರೆ. 'ಬಲಹೀನ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವುದು ನಮಗೇನೂ ಕಷ್ಟವಾಗಲಾರದು. ಬ್ರೆಟ್ ಲೀ ಮತ್ತು ಶಾನ್ ಟೈಟ್ ಅವರನ್ನು ಟೈಟಾಗಿ ಕಟ್ಟಿಹಾಕುವುದು ಹೇಗೆ ಎಂಬುದನ್ನು ನಾನು ಬಲ್ಲೆ' ಎಂದು ಯುವ್ವಿ ಕ್ವಾರ್ಟರ್ ಫೈನಲ್ ಪಂದಕ್ಕೆ ಕಿಚ್ಚುಹಚ್ಚಿದ್ದಾರೆ.
ಭಾರತ ಎಂಟರ ಘಟ್ಟ ಪ್ರವೇಶಿಸುವುದಕ್ಕೆ ಭಾರತದ ತಂಡದ ಈ ಯುವರಾಜನ ಪರಾಕ್ರಮ ಅಮೂಲ್ಯ ಕಾಣಿಕೆ ಸಲ್ಲಿಸಿದೆ. ಕಳೆದುಹೋಗಿದ್ದ ತನ್ನ ಎಂದಿನ ಲಯ ತಾಳವನ್ನು ಈತ ತಡವಾಗಿಯಾದರೂ ಸಕಾಲದಲ್ಲಿ ಕಂಡುಕೊಂಡಿರುವುದು ಅಭಿಮಾನಿಗಳಿಗೆ ರಸದೌತಣ ಉಂಡಂತಿದೆ. ಮೊದಲು ಭರ್ಜರಿ ಸೆಂಚುರಿ, ಬಳಿಕ ಬೌಲಿಂಗ್ ಸರ್ಜರಿ. ಇದು ಯುವ್ವಿಯ ರುದ್ರನರ್ತನ ಪರಿ. ಎಂಟಂಕಿ ಆಟದಲ್ಲಿ ಪರಸ್ಪರ ಎದುರಿಸುವ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾ ಪ್ರದರ್ಶನಗಳು ಸಮತೋಲವಾಗಿಯೇ ಇವೆ. ಎರಡೂ ತಂಡಗಳು ತಲಾ ಐದೈದು ಗೆದ್ದಿವೆ. ಗುರುವಾರ ಮೊಹಾಲಿಯಲ್ಲಿ ಯಾರು ಅದ್ಭುತ ಪ್ರದರ್ಶನ ನೀಡುತ್ತಾರೋ ಅವರದೇ ಗೆಲುವು ಎಂಬುದು ಸರಳ ಸೂತ್ರ. ಆಸ್ಟ್ರೇಲಿಯಾ ಕೈ ತುಸು ಮೇಲಾಗಿದೆಯಾದರೂ ...
'ಶಾರ್ಟ್ ಬಾಲ್ ದೊಡ್ಡ ಸಮಸ್ಯೆಯೇ ಅಲ್ಲ. ಟೆಸ್ಟ್ ಮತ್ತು ವನ್ ಡೆ ಪಂದ್ಯಗಳಲ್ಲಿ ಭಾರತ ನಂ1 ಎಂಬುದು ನೆನಪಿರಲಿ. ಶಾರ್ಟ್ ಪಿಚ್ ಬಾಲ್-ಗಳಿಗೆ ನಾವು ಹೆದರಿಕೊಂಡಿದ್ದಿದ್ದರೆ ಆ ಸ್ಥಾನ ತಲುಪುತ್ತಿದ್ದುದಾದರೂ ಹೇಗೆ' ಎಂದು ಯುವಿ ಮರುಪ್ರಶ್ನಿಸಿದ್ದಾರೆ. 'ಈಗಲೂ ಅಷ್ಟೆ ಅವರ ವೇಗಕ್ಕೆ ಪ್ರತ್ಯುತ್ತರ ನೀಡಲು ನಾವು ಕಾತರರಾಗಿದ್ದೇವೆ. ಅಷ್ಟಕ್ಕೂ ವಿಶ್ವ ಕಪ್ ಗೆಲ್ಲಲೇ ಬೇಕು ಎಂದು ನಿರ್ಧರಿಸಿರುವಾಗ ಆಸ್ಟ್ರೇಲಿಯಾ, ಪಾಕ್, ಶ್ರೀಲಂಕಾದಂತಹ ಯಾವುದೇ ಅತ್ಯುತ್ತಮ ತಂಡವಾಗಿರಲಿ ಗೆಲುವಿಗಾಗಿ ಆಡುತ್ತೇವೆ' ಎಂದು ಯುದ್ಧ ಸನ್ನದ್ಧ ಯುವ್ವಿ ಗುಡುಗಿದ್ದಾರೆ.
ಗ್ಲೆನ್ ಮೆಕ್-ಗ್ರಾತ್, ಶೇನ್ ವಾರ್ನ್, ಅಡಂ ಗಿಲ್-ಕ್ರಿಸ್ಟ್ ಅವರಂಥ ಘಟಾನುಘಟಿಗಳು ಇಲ್ಲದಿರುವುದು ತಂಡವನ್ನು ಮಂಕಾಗಿಸಿದೆ. ಇರುವ ರಿಕಿ ಪಾಂಟಿಂಗ್ ಯಾಕೋ ಯುದ್ಧಕ್ಕೆ ಮುನ್ನವೇ ಶಸ್ತ್ರತ್ಯಾಗ ಮಾಡಿದವರಂತೆ ಕಂಡುಬರುತ್ತಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡು ಜಯ ದಾಖಲಿಸುತ್ತೇವೆ ಎಂದು ಯುವ್ವಿ ಬೀಗುತ್ತಿದ್ದಾರೆ. 'ಅತ್ಲಾಗೆ ಒಂದು ಸೆಂಚುರಿ ಬಾರಿಸುವ ಜರೂರತ್ತಿತ್ತು. ಬ್ಯಾಟಿಂಗ್ ಕ್ರಮಾಂಕದಲ್ಲಿ ನನ್ನನ್ನು ಮೇಲಕ್ಕೆ ಕಳಿಸಿ ಧೋನಿ ಉಪಕಾರ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಲ್-ಗೆ ಸರಿಯಾಗಿ ಬ್ಯಾಟ್ ಬೀಸಿದ್ದು ಈ ಪಂದ್ಯದಲ್ಲೇ. ಈಗ ನಾನು ಫುಲ್ ಫಾರಂನಲ್ಲಿದ್ದೇನೆ' ಎಂದು ಯುವ್ವಿ ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಬೆಂಗಳೂರು ವಿಲ್ಸನ್ ಗಾರ್ಡನ್ ಶನಿ ಮಹಾತ್ಮ ನಮ್ಮ ಯುವರಾಜನನ್ನು ಹೀಗೇ ಆಶೀರ್ವದಿಸಲಿ ಎಂದು ಕನ್ನಡಿಗರು ಆಶಿಸಿದ್ದಾರೆ.












Click it and Unblock the Notifications