ಚನ್ನಪಟ್ಟಣದಿಂದ ಕುಮಾರಸ್ವಾಮಿ ಸ್ಪರ್ಧೆ?

ಚನ್ನಪಟ್ಟಣ ಕ್ಷೇತ್ರದಲ್ಲಿ ತಮ್ಮ ಸ್ಪರ್ಧೆ ಪ್ರಭಾವ ಬೀರುವುದಾದರೆ, ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ತೆಗೆದು ಕೊಳ್ಳಲಾಗುವುದೆಂದು ಕುಮಾರಸ್ವಾಮಿ ಅವರು ಭಾನುವಾರ ನೀಡಿದ್ದ ಹೇಳಿಕೆಯನ್ನೇ ಇಂದು ಕೂಡಾ ಪುನರುಚ್ಚರಿಸಿದರು. ಅಭಿಮಾನಿಗಳು ಹಾಗೂ ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ, ಈಗ ಮತ್ತೆ ರಾಜ್ಯ ರಾಜಕಾರಣದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಎಚ್ಡಿಕೆ ನಿರ್ಧರಿಸಿದ್ದಾರೆಂದು ಅವರ ಆಪ್ತಮೂಲಗಳಿಂದ ತಿಳಿದು ಬಂದಿದೆ.
ಕುಮಾರಸ್ವಾಮಿ ಸ್ಪರ್ಧಿಸುವುದಕ್ಕೆ ಪಕ್ಷದ ವರಿಷ್ಠ ದೇವೇಗೌಡ ಕೂಡಾ ಸಮ್ಮತಿಸಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಜೊತೆ ಕೈಗೂಡದ ಬೆಸುಗೆಯಿಂದ ಕುಮಾರಸ್ವಾಮಿ ಬೇಸತ್ತಿದ್ದಾರೆ. ಹಾಗಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ ಮತ್ತೆ ರಾಜ್ಯದಲ್ಲಿ ಹೊಸ ಆರಂಭ ಪಡೆಯಲಿದ್ದಾರೆ ಎನ್ನಲಾಗಿದೆ. ರಾಜ್ಯ ಪ್ರಬಲವಾದ ಪ್ರತಿಪಕ್ಷದ ಕೊರತೆಯನ್ನು ಎದುರಿಸುತ್ತಿದೆ. ಕುಮಾರಸ್ವಾಮಿ ಅವರ ಆಗಮನದಿಂದ ವಿಧಾನಸಭೆಗೆ ಹೊಸ ಕಳೆ ಬಂದ ಹಾಗೆ ಆಗುತ್ತದೆ ಎಂದು ಅವರ ಆಪ್ತೇಷ್ಟರು ಹೇಳಿದ್ದಾರೆ.
ಉಪಚುನಾವಣೆ ನಡೆಯುವ ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿ ಕಾಂಗ್ರೆಸ್ ಮತ್ತು ಒಂದರಲ್ಲಿ ಜೆಡಿಎಸ್ ಶಾಸಕರಿದ್ದರು. ಚನ್ನಪಟ್ಟಣ ಕ್ಷೇತ್ರದಿಂದ ನಟ ಅಂಬರೀಶ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ ಎಂದು ಹೇಳಲಾಗಿದೆ. ಒಂದು ವೇಳೆ ಅಂಬರೀಶ್ ಇದಕ್ಕೆ ಒಪ್ಪಿಗೆ ಸೂಚಿಸದೇ ಇದ್ದ ಪಕ್ಷದಲ್ಲಿ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಅಥವಾ ಬಿ ಕೆ ಹರಿಪ್ರಸಾದ್ ಸಹೋದರ ಬಿಕೆ ಶಿವರಾಂ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಂಚೂಣಿಯಲ್ಲಿದ್ದಾರೆ. ಅದರೆ, ಕೊನೆ ಗಳಿಗೆಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ. ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದ ಸಿಪಿ ಯೋಗೇಶ್ವರ್ ಅವರಿಗೆ ಬಿಜೆಪಿ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಹೆಚ್ಚಳವಾಗಿದೆ.












Click it and Unblock the Notifications