ರಿಹಾನ್ ಕಾಲುವೆ ಪಾಲಾಗಿಲ್ಲ, ಅಪಹರಿಸಲಾಗಿದೆ?

2009ರಲ್ಲಿ ಅಭಿಷೇಕ್ ಎಂಬ ಬಾಲಕ ಮಳೆಗಾಲದಲ್ಲಿ ಕೊಚ್ಚಿ ಹೋಗಿದ್ದ ನಂತರ ನಡೆದ ಇಂಥ ಘಟನೆ ಜನರನ್ನು ತೀವ್ರ ಕಳವಳಕ್ಕೀಡು ಮಾಡಿತ್ತು. ದೂರು ಬಂದ ಕೂಡಲೆ ಬಾರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಲೆ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಆದರೆ, ಮಗು ಕಾಲುವೆಯಲ್ಲಿ ಮುಳುಗಿರಲಿಕ್ಕಿಲ್ಲ ಅಪರಹಣಕ್ಕೀಡಾಗಿರಬಹುದು ಎಂಬ ಸುದ್ದಿ ಕೇಳಿ, ಜನರ ಕೆಂಗಣ್ಣಿಗೆ ಬಿದ್ದಿದ್ದ ಬಿಬಿಎಂಪಿ ಈಗ ನಿಟ್ಟುಸಿರು ಬಿಟ್ಟಿದೆ.
ಮಗು ಸೋಮವಾರವೇ ಮುಳುಗಿದೆ ಎಂದು ದೂರು ಬಂದಿದ್ದರೂ, ಬಿಬಿಎಂಪಿ ಮಂಗಳವಾರದಿಂದ ಬಾಲಕನ ಹುಡುಕಾಟ ಆರಂಭಿಸಿತ್ತು. ಇಡೀ ದಿನ ಹುಡುಕಿ ಬುಧವಾರ ಕೂಡ ಬಾಲಕನಿಗಾಗಿ ಹುಡುಕಾಟ ಮುಂದುವರಿದಿತ್ತು. ಅಷ್ಟರಲ್ಲಿಯೇ, ಕೌಟುಂಬಿಕ ಕಲಹದ ಕಾರಣದ ಹಿನ್ನೆಲೆಯಲ್ಲಿ ಅಪರಹಣ ಮಾಡಿರಬಹುದು ಎಂದು ರಿಹಾನ್ ನ ತಾಯಿಯೇ ಆರೋಪಿಸುತ್ತಿದ್ದಾಳೆ.
ಆಗಿರುವುದೇನು? : ರಿಹಾನ್ ಎಂಬಾತ ಸಿದ್ದಿಕ್ ಮತ್ತು ಜಬೀನಾ ಎಂಬುವವರ ಮಗ. ಜಬೀನಾಳ ತಂದೆ ಶೌಕತ್ ಅಲಿಗೆ ಇಬ್ಬರು ಪತ್ನಿಯರು. ಮೊದಲನೆಯವಳು ಶಕೀರಾ ಮತ್ತು ಎರಡನೆಯವಳು ನೂರ್ ಜಹಾನ್. ಜಬೀನಾ ಮೊದಲನೆಯ ಹೆಂಡತಿಯ ಮಗಳು. ಜಬೀನಾಳ ಮದುವೆಯಾದ ಮೇಲೆ ಶೌಕತ್ ಅಲಿಗೆ ಸೇರಿದ ಮನೆಯನ್ನು ಜಬೀನಾಳಿಗೆ ನೀಡಲಾಗಿತ್ತು. ಇದರಿಂದ ಸಿಟ್ಟಿಗೆದ್ದಿದ್ದ ಎರಡನೆಯ ಹೆಂಡತಿ ನೂರ್ ಜಹಾನ್ ನಾಲ್ಕು ವರ್ಷಗಳಿಂದಲೇ ಜಬೀನಾ ವಿರುದ್ಧ ಕತ್ತಿ ಮಸೆಯುತ್ತಿದ್ದಳು.
ಸಂಶಯಕ್ಕೆ ಕಾರಣ : ರಿಹಾನ್ ಕಾಣೆಯಾದಂದಿನಿಂದ ಶೌಕತ್ ಅಲಿಯ ಎರಡನೆಯ ಹೆಂಡತಿ ನೂರ್ ಜಹಾನ್ ಕೂಡ ನಾಪತ್ತೆಯಾಗಿದ್ದಾಳೆ. ಜಬೀನಾ ವಿರುದ್ಧ ದ್ವೇಷ ಸಾಧಿಸುತ್ತಿದ್ದ ನೂರ್ ರಿಹಾನ್ ನನ್ನು ಅಪಹರಿಸಿರಬಹುದೆಂದು ಶಂಕಿಸಲಾಗಿದೆ. ಪೊಲೀಸರು ಈಗ ನೂರ್ ಜಹಾನ್ ಳ ಹುಡುಕಾಟದಲ್ಲಿ ತೊಡಗಿದ್ದಾರೆ.












Click it and Unblock the Notifications