ಮೆಜೆಸ್ಟಿಕ್ 45 ಅಂತಸ್ತಿನ ಕಟ್ಟಡ ಕಟ್ಟುವವರು ಯಾರು?

ಬಿಎಂಟಿಸಿ ಹಾಗೂ ಮೆಟ್ರೋ ರೈಲಿನ ಮಧ್ಯೆ ಜಂಟಿ ಪಾಸ್ ಅನಾವರಣಗೊಳಿಸಿದ ನಂತರ ಕಟ್ಟಡ ನಿರ್ಮಾಣದ ಪ್ಲಾನ್ ಅನ್ನು ಅಶೋಕ್ ಬಿಚ್ಚಿಟ್ಟರು. ದೇಶದಲ್ಲಿಯೇ ಅತ್ಯಂತ ದೊಡ್ಡ ವಾಣಿಜ್ಯ ಸಂಕೀರ್ಣ ಇದಾಗಲಿದ್ದು, ಒಟ್ಟು 1300 ಕೋಟಿ ರೂ.ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುವುದು.ಕಾಮಗಾರಿಗಾಗಿ ಟೆಂಡರ್ ಕಾರ್ಯ ಮುಗಿದಿದ್ದು, ಈ ಟೆಂಡರ್ ಪ್ರಕ್ರಿಯೆಯ ಸಂದರ್ಭದಲ್ಲಿ ರಿಲಯನ್ಸ್, ಎಲ್ ಆಂಡ್ ಟಿ ಸೇರಿದಂತೆ ಹೆಸರಾಂತ ಕಂಪೆನಿಗಳು ಭಾಗವಹಿಸಿವೆ ಎಂದರು.
ಯಾರಿಗೆ ಸಿಗಲಿದೆ ಟೆಂಡರ್ : ಸದ್ಯದಲ್ಲಿಯೇ ಯಾರಿಗೆ ಟೆಂಡರ್ ನೀಡಬೇಕೆಂಬ ಕುರಿತು ನಿರ್ಧಾರಕ್ಕೆ ಬರಲಾಗುವುದು. ಟೆಂಡರ್ ಅರ್ಜಿ ಸಲ್ಲಿಸಿದ ಕಂಪೆನಿಗಳಲ್ಲಿ ಎಲ್ ಅಂಡ್ ಟಿ, ಹಿಂದೂಸ್ತಾನ್ ಕನ್ ಸ್ಟ್ರಕ್ಷನ್ ಕಂಪೆನಿ, ನಾಗಾರ್ಜುನ ಕನ್ ಸ್ಟ್ರಕ್ಷನ್ ಕಂಪೆನಿ, ಗಮ್ಮಾನ್ ಇಂಡಿಯಾ, ಜಿಎಂಸಿ ಪ್ರಾಜೆಕ್ಟ್ಸ್, ಗಾಯತ್ರಿ ಪ್ರಾಜೆಕ್ಟ್ಸ್, ಶ್ರೀರಾಮ್ ಪ್ರಾಪರ್ಟೀಸ್, ಸೋಮ, ಐವಿಆರ್ ಸಿಎಲ್, ಎಸ್ಸಾರ್ ಪ್ರಾಜೆಕ್ಟ್ಸ್ ಹಾಗೂ ರಾಮ್ಕಿ ಇನ್ಫ್ರಾ ಪ್ರಮುಖವಾದವು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC) ಹಾಗೂ ಬೆಂಗಳೂರು ಮಹಾ ನಗರ ಪಾಲಿಕೆ ಸಾರಿಗೆ ಸಂಸ್ಥೆ (BMTC) ಜಂಟಿಯಾಗಿ ತಯಾರಿಸಿರುವ ನೀಲನಕ್ಷೆಗೆ ಇನ್ನೂ ತಿದ್ದುಪಡಿ ಆಗುತ್ತಲೇ ಇದೆ. Inter Modal Transit Centre (IMTC) ನ ವಿನ್ಯಾಸ, ನಿರ್ಮಾಣ, ಆರ್ಥಿಕ ಸೌಲಭ್ಯ, ಸಂಚಾರ ವ್ಯವಸ್ಥೆ ಬಗ್ಗೆ ಅಂತಿಮ ನಿರ್ಣಯ ಸಂಸ್ಥೆ ಮಾಡುತ್ತಿದೆ ಎಂದು ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ ಹೇಳಿದ್ದಾರೆ.
ಕಟ್ಟಡದಲ್ಲಿ ಏನಿರುತ್ತದೆ?: ಸರ್ಕಾರದಿಂದ 30 ಎಕರೆ ಜಾಗ ನೀಡಲಾಗುತ್ತದೆ, ಬಿಡ್ಡರ್ ಗಳು ಬಂಡವಾಳ ಹೂಡಬೇಕಾಗುತ್ತದೆ. ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಟರ್ಮಿನಲ್ ಅಲ್ಲದೆ, ಪ್ರಯಾಣಿಕರಿಗೆ ಸೌಲಭ್ಯಗಳು, ಮೆಟ್ರೋ ರೈಲು ನಿಲ್ದಾಣಗಳಿಗೆ ಸಂಪರ್ಕ, ಕಾರು ಹಾಗೂ ಇತರೆ ವಾಹನ ನಿಲುಗಡೆ ಹಾಗೂ ವಾಣಿಜ್ಯ ಕೇಂದ್ರಗಳನ್ನು ಈ ಕಟ್ಟಡ ಹೊಂದಿರುತ್ತದೆ ಎಂದು ಗೌರವ್ ಗುಪ್ತ ಹೇಳಿದರು.
ಸುಮಾರು 3,000 ಕಾರುಗಳನ್ನು ಏಕಕಾಲಕ್ಕೆ ನಿಲ್ಲಿಸಬಹುದು. ಸಿಟಿ ರೈಲು ನಿಲ್ದಾಣ, ಮೆಟ್ರೋ ರೈಲು ನಿಲ್ದಾಣಕ್ಕೆ ಸುರಂಗ ಮಾರ್ಗ ಮೂಲಕ ಸಂಪರ್ಕ ಕಲ್ಪಿಸಲಾಗುವುದು. ಈ ಕಟ್ಟಡವನ್ನು ಕಟ್ಟುವವರು ಯಾರು ಎಂಬ ಪ್ರಶ್ನೆಗೆ ಇನ್ನೆರಡು ಮೂರು ತಿಂಗಳಲ್ಲಿ ಉತ್ತರ ದೊರೆಯಲಿದೆ. 2011 ರ ಅಂತ್ಯಕ್ಕೆ ಕಾಮಗಾರಿ ಆರಂಭವಾಗಲಿದ್ದು, ಸುಮಾರು ಐದು ವರ್ಷಗಳಲ್ಲಿ ಪೂರೈಸಬೇಕಿದೆ ಎಂದು ಗುಪ್ತಾ ತಿಳಿಸಿದರು.












Click it and Unblock the Notifications