ಸ್ಪಿನ್ ಆಡೋದು ಕಲಿಬೇಕು: ಮೈಕಲ್ ಕ್ಲಾರ್ಕ್
ಬೆಂಗಳೂರು, ಫೆ.14: ಆಸ್ಟ್ರೇಲಿಯಾದ ಉಪ ನಾಯಕ ಮೈಕಲ್ ಕ್ಲಾರ್ಕ್ ಕನಸಿನಲ್ಲೂ ಸ್ಪಿನ್ನರ್ ಗಳು ಕಾಡಿದ್ದರಂತೆ. ಆಸೀಸ್ ವಿಶ್ವಕಪ್ ಕ್ರಿಕೆಟ್ 2011 ಚಾಂಪಿಯನ್ ಆಗಬೇಕಾದರೆ ಮೊದಲಿಗೆ ಸ್ಪಿನ್ ದಾಳಿ ಎದುರಿಸುವುದನ್ನು ಕಲಿಯಬೇಕು ಎಂದು ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸ್ಪಿನ್ ಮೋಡಿಗೆ ಸಿಲುಕಿ ಬ್ಯಾಟಿಂಗ್ ದೌರ್ಬಲ್ಯವನ್ನು ಪ್ರದರ್ಶಿಸಿದ ಆಸೀಸ್ ಬ್ಯಾಟ್ಸ್ ಮನ್ ಗಳಿಗೆ ಕ್ಲಾರ್ಕ್ ಈ ರೀತಿ ಕಿವಿಮಾತು ಹೇಳಿದ್ದಾರೆ.
ಉಪ ಖಂಡದ ಪಿಚ್ ಗಳು ನಿಧಾನ ಗತಿಯಿಂದ ಕೂಡಿದ್ದು, ವೇಗಿಗಳಿಗಿಂತ ಸ್ಪಿನ್ ಗೆ ಹೆಚ್ಚು ಹೊಂದಿಕೊಳ್ಳುತ್ತದೆ. ಭಾರತ, ಪಾಕ್, ಶ್ರೀಲಂಕಾ ಸ್ಪಿನ್ನರ್ ಗಳನ್ನು ಚಚ್ಚುವ ಸಾಮರ್ಥ್ಯವಿಲ್ಲದಿದ್ದರೆ ವಿಶ್ವಕಪ್ ಗೆಲ್ಲುವ ಆಸೆಯನ್ನು ಕೈಬಿಡಬೇಕು ಅಷ್ಟೇ ಎಂದು ಕ್ಲಾರ್ಕ್ ಹೇಳಿದ್ದಾರೆ.
ವಿಶ್ವಕಪ್ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ
ಕ್ರಿಕೆಟ್ ವಿಶ್ವಕಪ್ 2011 ವೇಳಾಪಟ್ಟಿ
ವಿಡಿಯೋ: ಆಸೀಸ್ ರನ್ನು ಬಗ್ಗುಬಡಿದ ಭಾರತ
ಕ್ಲಾರ್ಕ್ ಮಾತಿನಲ್ಲೂ ಸತ್ಯವಿದೆ. ಇದಕ್ಕೆ ನಿದರ್ಶನವಾಗಿ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಆಸೀಸ್ ಬ್ಯಾಟ್ಸ್ ಮನ್ ಗಳು ತಿಣುಕಾಡಿದ್ದರು. ಭಾರತದ ಸ್ಪಿನ್ನರ್‌ಗಳಾದ ಪಿಯೂಷ್ ಚಾವ್ಲಾ, ಹರ್ಭಜನ್ ಸಿಂಗ್ ದಾಳಿಗೆ ತತ್ತರಿಸಿದ ಹಾಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯ ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ಭಾರತದ ಎದುರು 38 ರನ್‌ಗಳ ಸೋಲು ಅನುಭವಿಸಿದೆ.
ಹೊನಲು ಬೆಳಕಿನ ಅಭ್ಯಾಸ ಪಂದ್ಯದಲ್ಲಿ ಭಾರತ 214 ರನ್‌ಗಳ ಸಾಧಾರಣ ಮೊತ್ತ ಪೇರಿಸಿದ್ದರೂ ಆಸ್ಟ್ರೇಲಿಯಕ್ಕೆ ಈ ಸವಾಲನ್ನು ಬೆನ್ನಟ್ಟಲು ಸಾಧ್ಯವಾಗದೆ 37.5 ಓವರ್‌ಗಳಲ್ಲಿ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಕ್ಲಾರ್ಕ್‌ರನ್ನು ಪೆವಿಲಿಯನ್‌ಗೆ ಅಟ್ಟಿದ ಚಾವ್ಲಾ ಕ್ಯಾಮರೊನ್ ವೈಟ್ (4), ಡೇವಿಡ್ ಹಸ್ಸಿ (0), ಕಾಲುಮ್ ಫರ್ಗ್ಯುಸನ್ (8)ರಿಗೆ ಪೆವಿಲಿಯನ್ ದಾರಿ ತೋರಿಸಿದರು. ಇದರೊಂದಿಗೆ ಚಾವ್ಲಾ 31ಕ್ಕೆ 4 ವಿಕೆಟ್ ಪಡೆದು ಅತ್ಯುತ್ತಮ ಪ್ರದರ್ಶನವಿತ್ತರು.
ಗೆಲುವಿನಿಂದ ಬೀಗುವಂತಿಲ್ಲ: ಬ್ಯಾಟಿಂಗ್ ವೈಫಲ್ಯ ಒಂದು ಕಡೆಯಾದರೆ, ಮೊನಚುತನ ತೋರಿದ ವೇಗದ ಬೌಲರ್ ಗಳ ಸಮಸ್ಯೆ ಭಾರತಕ್ಕೆ ಇದ್ದೇ ಇದೆ. ಸ್ಪಿನ್ ದಾಳಿಯನ್ನು ನೆಚ್ಚಿಕೊಂಡು ಸರಣಿಯಲ್ಲಿ ಸಾಗುವಂತಿಲ್ಲ. ಭಾರತ ತನ್ನ ಮುಂದಿನ ಅಭ್ಯಾಸ ಪಂದ್ಯವನ್ನು ಫೆ. 16ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸುಧಾರಿಸಿಕೊಳ್ಳಲು ಸದವಕಾಶವಿದೆ. ನ್ಯೂಜಿಲೆಂಡ್ ನ ವೇಗಿಗಳನ್ನು ಎದುರಿಸಲು ಕಠಿಣ ಅಭ್ಯಾಸ ಸಾಗಿದೆ.











Click it and Unblock the Notifications