ಪುತ್ತೂರು ಮಲ್ಲಿಗೆ ಎಂಎಂಎಸ್: ಅಪ್ರಾಪ್ತನ ಸೆರೆ

ಪುತ್ತೂರಿನ ಸಂತ ಫಿಲೋಮಿನಾ ಮೊದಲ ವರ್ಷದ ಬಿಬಿಎಂ ವಿದ್ಯಾರ್ಥಿನಿ ಶ್ರುತಿ ಎಂಬಾಕೆಯ ಹೆಸರನ್ನು ಬಳಸಿ ಸೆಕ್ಸ್ ಸಿ.ಡಿ.ಯನ್ನು ನಿರ್ಮಿಸಿದ್ದ ಇದೇ ಕಾಲೇಜಿನ ರಿಹೀಜ್ ಎಂಬಾತನನ್ನು ಪುತ್ತೂರು ಪೊಲೀಸರು ಬಂಧಿಸಿ ಸೆಕ್ಷನ್ 205(ಅಶ್ಲೀಲ ಚಿತ್ರ ರವಾನೆ) ಹಾಗೂ ಸೆಕ್ಷನ್ 509(ಮಹಿಳೆಯೊಬ್ಬರ ಮಾನಕ್ಕೆ ಕುಂದು)ನಡಿ ಪ್ರಕರಣ ದಾಖಲಿಸಿದ್ದಾರೆ.
ಅಪ್ರಾಪ್ತನಾಗಿರುವ ರಿಹೀಜ್ ನನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಲಯ ಜಾಮೀನು ನೀಡಿದೆ. 'ಶ್ರುತಿ ಪುತ್ತೂರು ಸೈ(ರೆಡಿ) ಟು ಡ್ಯಾನ್ಸ್ ಡು ಎನಿಥಿಂಗ್" ಎನ್ನುವ ಹೆಸರಿನಲ್ಲಿ ವಿದ್ಯಾರ್ಥಿನಿ ಶ್ರುತಿ ಮುಖಚರ್ಯೆ ಹೋಲುವ ಯುವತಿಯೊಡನೆ ಪುತ್ತೂರು ಮಲ್ಲಿಗೆ ಎಂಬ ಹೆಸರಿನ ಸೆಕ್ಸ್ ದೃಶ್ಯಗಳು ಕಳೆದ ಅಕ್ಟೋಬರ್ 30ರಂದು ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡಿದ್ದಲ್ಲದೆ ಪತ್ರಿಕೆಗಳಲ್ಲಿ ವರದಿಯಾಗಿದ್ದವು. ಈ ಸಿ.ಡಿ. ಪುತ್ತೂರು ಮಾತ್ರವಲ್ಲದೆ ಜಿಲ್ಲೆಯ ಇತರ ಕಡೆಗಳಲ್ಲಿ ಕೂಡ ಸಂಚಲನವನ್ನು ಉಂಟು ಮಾಡಿತ್ತು.
ಮಾಧ್ಯಮಗಳ ಮುಂದೆ ಗೋಳಾಡಿದ್ದ ಶ್ರುತಿ: ತನ್ನ ಹೆಸರನ್ನು ಕೆಡಿಸಲು ಪ್ರಯತ್ನಿಸಿ ಮಾನಹರಾಜು ಹಾಕಿದವರ ವಿರುದ್ಧ ಶ್ರುತಿ ಖುದ್ದಾಗಿ ಪುತ್ತೂರು ಠಾಣೆಗೆ ದೂರು ನೀಡಿ ವೀಡಿಯೋ ಕ್ಲಿಪ್ಪಿಂಗ್ ಮತ್ತು ಅನುಮಾನವಿರುವವರ ಹೆಸರನ್ನು ಪೊಲೀಸರಿಗೆ ತಿಳಿಸಿದ್ದಳು. ಆದರೆ ಇದರಿಂದ ಯಾವುದೇ ಪರಿಣಾಮ ಬೀರದಾಗ ಶ್ರುತಿ ಹಿಂದೂ ಸಂಘಟನೆಯ ಪ್ರಮುಖರ ನೆರವಿನಿಂದ ಜ.13ರಂದು ಪತ್ರಿಕಾಗೋಷ್ಠಿ ನಡೆಸಿ, ಪೊಲೀಸರ ವಿರುದ್ಧ ಕಿಡಿಕಾರಿದ್ದಳು.
ಈ ಸುದ್ದಿ ಮಾಧ್ಯಮಗಳಲ್ಲಿ ಪತ್ರಿಕಾಗೋಷ್ಠಿ ನೋಡಿ ಈ ಬಗ್ಗೆ ಎಚ್ಚೆತ್ತುಕೊಂಡಿದ್ದ ಪೊಲೀಸರು ದಕ್ಷಿಣ ಕನ್ನಡ ಎಸ್‌ಪಿ ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹುಡುಕಲು ಯಶಸ್ವಿಯಾಗಿತ್ತು. ಆದರೆ ಆತ ಅಪ್ರಾಪ್ತನಾಗಿರುವ ಕಾರಣ ಮುಂದಿನ ತಿಂಗಳು ಆತನಿಗೆ 18 ವರ್ಷ ತುಂಬಿದ ಬಳಿಕ ಬಂಧಿಸಲಾಗುವುದೆಂದು ಎಸ್‌ಪಿ ಹೇಳಿದ್ದರು. ಆದರೆ ಆರೋಪಿಗೆ 18 ತುಂಬುವ ಮೊದಲೇ ಬಂಧಿಸಿರುವುದು ಹಲವಾರು ಅನುಮಾನಗಳಿಗೆ ಕೂಡ ಕಾರಣವಾಗಿದೆ.
ಬ್ಲ್ಯಾಕ್‌ಮೇಲ್ ಕೂಡಾ ಮಾಡಿದ್ದ?: ರಿಹೀಜ್ ಆಗಾಗ ಶ್ರುತಿ ಮೊಬೈಲ್‌ಗೆ ಎಸ್‌ಎಂಎಸ್ ಕಳುಹಿಸಿ, ಕರೆ ಮಾಡಿ ಅಲ್ಲಿ ನನ್ನನ್ನು ಭೇಟಿಯಾಗು, ಇಲ್ಲಿ ಭೇಟಿಯಾಗು ಎಂದು ಪೀಡಿಸುತ್ತಿದ್ದ. ಆದರೆ ಶ್ರುತಿ ಇದಕ್ಕೆಲ್ಲ ಕ್ಯಾರೇ ಅನ್ನುತ್ತಿರಲಿಲ್ಲ. ಹೇಗಾದರೂ ಮಾಡಿ ಶ್ರುತಿಯನ್ನು ಪಡೆಯಲೇಬೇಕೆಂದು ಬಯಸಿದ್ದ ಆತನಿಗೆ ಹೊಳೆದ ತಂತ್ರವೇ ಸೆಕ್ಸ್ ಸಿ.ಡಿ. ಈ ವಿಡಿಯೋ ಕ್ಲಿಪ್ಪಿಂಗ್ ಗಳು ನಕಲಿ ಎಂದು ಪೊಲೀಸರು ಡಿಸೆಂಬರ್ ತಿಂಗಳಿನಲ್ಲಿ ದೃಢಪಡಿಸಿದ್ದರು.
ಇದರಲ್ಲಿ ಶ್ರುತಿಯ ಹೆಸರನ್ನು ಬಳಸಿ ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಿ ತನ್ನ ಆಸೆಯನ್ನು ತೀರಿಸುವ ಇರಾದೆ ಆತನಲ್ಲಿತ್ತು ಎಂದು ವಿಚಾರಣೆ ನಡೆಸಿದ ಪೊಲೀಸರಿಂದ ತಿಳಿದುಬಂದಿದೆ. ಆದರೆ ಇದರ ಹಿಂದೆ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಇರಲು ಸಾಧ್ಯವಿಲ್ಲ. ಇನ್ನು ಹಲವು ಮಂದಿಯ ಕೈವಾಡವಿರಬಹುದು. ಇದರ ಬಗ್ಗೆ ಪೊಲೀಸರು ಇನ್ನಷ್ಟು ತನಿಖೆ ನಡೆಸಿ ಇದರ ಹಿಂದಿರುವವರನ್ನು ಬಂಧಿಸಬೇಕೆಂದು ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿವೆ.
ಮಲ್ಲಿಗೆ ಪರಿಮಳ: ಮೈಸೂರು ಮಲ್ಲಿಗೆ ಇದ್ದಂತೆ ಭಟ್ಕಳ, ಪಡುಬಿದ್ರಿ, ಕುಪ್ಪೆಪದವು, ವಾಮಂಜೂರು, ಸುಳ್ಯ, ಮಂಗಳೂರು, ಉಡುಪಿ, ಕುಂದಾಪುರ ಹೀಗೆ ನಾನಾ ಊರುಗಳ ಹೆಸರಿನ ಮಲ್ಲಿಗೆಗಳು(ಸೆಕ್ಸ್ ಕ್ಲಿಪಿಂಗ್ಸ್) ರಾಜ್ಯದೆಲ್ಲೆಡೆ ಹರಡಿದ್ದವು. ಇದಕ್ಕೆ ಇತ್ತೀಚೆಗೆ ಉಜಿರೆ ಮಲ್ಲಿಗೆ ಹಾಗೂ ಪುತ್ತೂರು ಮಲ್ಲಿಗೆ ಸೇರ್ಪಡೆಯಾಗಿದ್ದವು.[ಕ್ರೈಂ]












Click it and Unblock the Notifications