ಅನಂತ್ ಗೆ ಸಿಎಂ ಹುದ್ದೆ ತಪ್ಪಿಸಿದ್ದೇ ಯಡ್ಡಿ : ಬೇಳೂರು

ಬುಧವಾರ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆಯೇ ಅನಂತ್ ಕುಮಾರ್‌ಗೆ ನಿರಾಯಸವಾಗಿ ಮುಖ್ಯಮಂತ್ರಿ ಹುದ್ದೆ ಒಲಿದು ಬಂದಿತ್ತು. ಆದರೆ ಅವರಿಗೆ ಆ ಹುದ್ದೆ ಸಿಗದಂತೆ ಯಡಿಯೂರಪ್ಪ ಕುತಂತ್ರ ನಡೆಸಿದರು. ಹಲವು ವರ್ಷಗಳಿಂದ ಬ್ರಾಹ್ಮಣ ಸಮಾಜ ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿದೆ. ಆದರೆ ಅದೇ ಸಮುದಾಯಕ್ಕೆ ಸೇರಿದ ಅನಂತ್ ಕುಮಾರ್‌ರವರಿಗೆ ಸಿಎಂ ಹುದ್ದೆ ಸಿಗದಂತೆ ಮಾಡುವ ಮೂಲಕ, ಬ್ರಾಹ್ಮಣ ಸಮುದಾಯಕ್ಕೆ ಯಡಿಯೂರಪ್ಪ ದ್ರೋಹ ಎಸಗಿದ್ದಾರೆ. ಈ ಮೂಲಕ ತಮ್ಮ ನಿಲುವು ಏನೆಂಬುವುದನ್ನು ಸಾಬೀತು ಪಡಿಸಿದ್ದಾರೆಂದು ಆರೋಪಗಳ ಸುರಿಮಳೆಗೈದರು.
ಯಡಿಯೂರಪ್ಪರವರು ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತ ಗ್ರಾಮಗಳಿಗೆ ಕಾಲಿಡುವುದಿಲ್ಲವೆಂದು ಹೇಳಿದ್ದಾರೆ. ಇವರ ಆಡಳಿತ ವೈಖರಿ ಕಂಡಿರುವ ಮತದಾರರು ಇನ್ನು ಮುಂದೆ ಜಿಲ್ಲೆಗೇ ಕಾಲಿಡಬೇಡಿ ಎಂದು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದು ಲೇವಡಿ ಮಾಡಿದರು.
ಯಡಿಯೂರಪ್ಪ ಅವರು ರಾಜ್ಯ ಕಂಡ ಅತೀ ಭ್ರಷ್ಟ ಮುಖ್ಯಮಂತ್ರಿ. ಎಲ್ಲ ರಂಗಗಳಲ್ಲಿಯೂ ಇವರು ವಿಫಲರಾಗಿದ್ದು, ಸ್ವಜನ ಪಕ್ಷಪಾತ, ಹಗರಣಗಳಲ್ಲಿ ಮುಳಗಿದ್ದಾರೆ. ಈಗಾಗಲೇ ಕರ್ನಾಟಕದ ಆಸ್ತಿಯನ್ನು ಗುಳುಂ ಮಾಡಿದ್ದಾರೆ. ದಿಲ್ಲಿಯಲ್ಲಿಯೂ ಆಸ್ತಿ ಗುಳುಂ ಮಾಡಲು ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ ಎಂದು ಗೋಪಾಲಕೃಷ್ಣ ವ್ಯಂಗ್ಯವಾಡಿದರು.
ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಬಿಜೆಪಿ ಧೂಳೀಪಟವಾಗಿದೆ. ಬಿಜೆಪಿಯವರು ಹಂಚಿದ ಹಣ-ಹೆಂಡಕ್ಕೆ ಮತದಾರರು ಯಾವುದೇ ಬೆಲೆ ನೀಡಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪ್ರಭಾವ ಹಾಗೂ ತಮ್ಮ ಬೆಂಬಲದಿಂದ ಉತ್ತಮ ಸಾಧನೆಯನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದರು.
ಜಯ ನಮ್ಮ ಪರ : ಬಿಜೆಪಿ ಪಕ್ಷದ 11 ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಜಯ ತಮ್ಮ ಪರವಾಗಿರಲಿದೆ ಎಂದು ಅನರ್ಹ ಶಾಸಕ ಬೇಳೂರು ಗೋಪಾಕೃಷ್ಣರವರು ವಿಶ್ವಾಸ ವ್ಯಕ್ತಪಡಿಸಿದರು. [ಪಂಚಾಯಿತಿ ಚುನಾವಣೆ]












Click it and Unblock the Notifications