ಅವಳು ಮದುವೆಯಾಗು ಎಂದದ್ದೇ ತಪ್ಪಾಯಿತು!

Ramya from Chamarajnagar
ಓದುವ ವಯಸ್ಸಿನಲ್ಲಿ ಓದದೆ ಪ್ರೀತಿ, ಪ್ರೇಮದ ಬಲೆಗೆ ಬಿದ್ದರೆ ಏನಾಗುತ್ತೆ ಎಂಬುವುದಕ್ಕೆ ಮೈಸೂರಿನ ಕಾಲೇಜು ಹುಡುಗಿಯೊಬ್ಬಳ ಬರ್ಬರ ಹತ್ಯೆ ಪ್ರಕರಣ ಒಂದು ಸಾಕ್ಷಿಯಾಗಿದೆ. ಅಷ್ಟೇ ಅಲ್ಲ ಪ್ರೀತಿ, ಪ್ರೇಮದ ನಾಟಕ ಮಾಡಿ ಶೀಲಹರಣ ಮಾಡೋ ಹುಡ್ಗರ ಬಗ್ಗೆ ಎಚ್ಚರವಾಗಿರಲು ಹುಡುಗಿಯರಿಗೆ ಎಚ್ಚರಿಕೆಯ ಗಂಟೆಯೂ ಹೌದು.

ಇವತ್ತು ತನ್ನ ಪ್ರಿಯಕರನಿಂದಲೇ ಸುಟ್ಟು ಕರಕಲಾಗಿ ಹೋದ ಕಾಲೇಜು ಹುಡುಗಿಯ ಹೆಸರು ರಮ್ಯ. ಈಕೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಸಮೀಪದ ಹುಲ್ಲೇಪುರದ ನಿವಾಸಿ ಮಹದೇವ ಎಂಬುವರ ಮಗಳು. ಹದಿನೆಂಟು ವರ್ಷ ವಯಸ್ಸಿನ ಈಕೆ ತನ್ನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದಿದ್ದಳಲ್ಲದೆ, ಪಡುವಾರಹಳ್ಳಿಯಲ್ಲಿದ್ದುಕೊಂಡು ವಿಜಯನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದಳು. ಬಹುಶಃ ಓದಿನತ್ತ ಹೆಚ್ಚಿನ ಗಮನಹರಿಸಿದ್ದರೆ ಇವತ್ತು ಎಲ್ಲಾ ವಿದ್ಯಾರ್ಥಿನಿಯರಂತೆ ಕಾಲೇಜಿಗೆ ಹೋಗುತ್ತಾ ಇರಬಹುದಿತ್ತು. ಆದರೆ ರಮ್ಯ ಹಾಗೆ ಮಾಡಲಿಲ್ಲ. ಪಟ್ಟಣದ ಥಳಕು ಬಳಕಿಗೆ ಮರುಳಾದಳು. ಹರೆಯ ಅವಳ ಮನದಲ್ಲಿ ನೂರಾರು ಬಯಕೆಗಳನ್ನು ಗರಿಗೆದರಿಸಿತ್ತು. ಇತರೆ ವಿದ್ಯಾರ್ಥಿನಿಯರು ತಮ್ಮ ಬಾಯ್ ಫ್ರೆಂಡ್‌ಗಳೊಂದಿಗೆ ಸುತ್ತುವುದನ್ನು ನೋಡಿದಾಗ ತನಗೂ ಒಬ್ಬ ಬಾಯ್‌ಫ್ರೆಂಡ್ ಬೇಕೆನಿಸಿತ್ತು. ಅದರಂತೆ ಕೆಲವು ಹುಡುಗರೊಂದಿಗೆ ಕಾಲೇಜಿಗೆ ಗೋಲಿ ಹೊಡೆದು ಸಿನಿಮಾ, ಪಾರ್ಕ್ ಅಂತಹ ಸುತ್ತಾಡತೊಡಗಿದಳು. ಅಷ್ಟೇ ಅಲ್ಲ ತನ್ನ ಬಾಯ್‌ಫ್ರೆಂಡ್‌ಗಳನ್ನು ಕೂಡ ಬೋರ್ ಎನಿಸಿದಾಗಲೆಲ್ಲಾ ಬದಲಾಯಿಸತೊಡಗಿದಳು.

ಪ್ರೀತಿ ಆರಂಭ :
ಈಕೆಯನ್ನು ಹತ್ತಿರದಿಂದ ನೋಡುತ್ತಿದ್ದ ಪಡುವಾರಹಳ್ಳಿಯ ಪಡ್ಡೆ ಹುಡುಗ ಆಟೋ ಡ್ರೈವರ್ ಮುಕುಂದ ಅಲಿಯಾಸ್ ಲೂಸ್‌ಮಾದ ಎಂಬಾತನಿಗೆ ಕೆಟ್ಟ ಆಲೋಚನೆ ಬಂದಿತ್ತು. ಅದೇನೆಂದರೆ ಆಕೆಯನ್ನು ಹೇಗಾದರು ಮಾಡಿ ತನ್ನತ್ತ ಒಲಿಸಿಕೊಳ್ಳೋದು, ಆ ನಂತರ ಮಜಾ ಮಾಡೋದು. ಆದರೆ ಆಕೆ ತನ್ನ ಬುಟ್ಟಿಗೆ ಬೀಳಬೇಕಾದರೆ ಒಂದೇ ಒಂದು ಮಾರ್ಗವೆಂದರೆ ಪ್ರೀತಿಸುವ ನಾಟಕವಾಡುವುದು. ಅದನ್ನು ತುಂಬಾ ಎಚ್ಚರಿಕೆಯಿಂದ ಪ್ರಾರಂಭಿಸಿದನು. ರಮ್ಯ ಕಾಲೇಜಿಗೆ ಹೋಗುವಾಗಲೆಲ್ಲಾ ಆಕೆಯ ಹಿಂದೆ ಬಿದ್ದ ಈತ ತನ್ನೆಡೆಗೆ ಸೆಳೆಯಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡತೊಡಗಿದನು. ದಿನಕಳೆದಂತೆ ಅವಳು ಅವನ ಆಟಕ್ಕೆಲ್ಲಾ ಸ್ಪಂದಿಸತೊಡಗಿದಳು. ಹೀಗಿರುವಾಗ ರಮ್ಯಳನ್ನು ಅವತ್ತೊಂದು ದಿನ ನೀನು ನನ್ನನ್ನು ಪ್ರೀತಿಸುತ್ತೀಯಾ ಎಂದು ಕೇಳೇ ಬಿಟ್ಟ. ಆದರೆ ಮುಕುಂದ ನನ್ನನ್ನು ಪ್ರೀತಿಸಲು ಮುಂದಾಗಿರುವುದು ನನ್ನನ್ನು ಮದುವೆಯಾಗಲು ಅಲ್ಲ ಎಂಬುವುದು ಆಕೆಗೂ ಗೊತ್ತಿರಲಿಲ್ಲ. ಆ ವೇಳೆಗೆ ಆಕೆಯೊಂದಿಗೆ ಸುತ್ತುತ್ತಿದ್ದ ಕೆಲವು ಹುಡುಗರು ದೂರವಾಗಿದ್ದರು. ಹಾಗಾಗಿ ಮುಕುಂದನೇ ಮುಂದೆ ಬಂದು ನನ್ನನ್ನು ಪ್ರೀತಿಸುತ್ತೀಯಾ ಎಂದು ಕೇಳಿದಾಗ ಹಿಂದು ಮುಂದು ನೋಡದೆ ಗ್ರೀನ್ ಸಿಗ್ನಲ್ ನೀಡಿಯೇ ಬಿಟ್ಟಳು. ಮುಕುಂದನಿಗೆ ಸ್ವರ್ಗ ಮೂರೇ ಗೇಣು ಎಂಬಂತಾಗಿತ್ತು. ಆಟೋದಲ್ಲಿಯೇ ಇವರ ಪ್ರೇಮ ಸಲ್ಲಾಪಗಳು ಪ್ರಾರಂಭವಾಗಿತ್ತು.

ಹುಳಿ ಹಿಂಡಿದರು :
ಈ ನಡುವೆ ರಮ್ಯಳನ್ನು ಮುಕುಂದನ ಜೊತೆಯಲ್ಲಿ ನೋಡಿದ ಗೆಳೆಯರು ಏನಪ್ಪಾ ಆಕೆಯನ್ನು ಲವ್ ಮಾಡ್ತಿದ್ದಿಯಂತೆ ಹೌದಾ? ನಿನಗೇನು ಬಂತೋ ರೋಗ ಬೇರೆ ಹುಡ್ಗೀರು ಸಿಕ್ಕಿಲ್ವಾ? ಎಂದು ಛೇಡಿಸತೊಡಗಿದರಲ್ಲದೆ, ಆಕೆ ಈ ಮೊದಲೇ ಹಲವರನ್ನು ಲವ್ ಮಾಡಿದ್ದಾಳೆ ಎಂದು ಹೇಳತೊಡಗಿದರು. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ಮುಕುಂದ ಅಯ್ಯೋ ಆಕೆಯನ್ನು ಪ್ರೀತಿಸಿ ಮದುವೆಯಾಗುವುದಕ್ಕೆ ನಾನೇನು ದಡ್ಡನಾ ಎಲ್ಲಾ ನಾಟಕ ಸಿಗುವಷ್ಟು ದಿನ ಮಜಾ ಮಾಡಿ ಬಿಟ್ಟುಬಿಡುವುದಷ್ಟೆ ಎನ್ನುತ್ತಾ ಓಡಾಡಿಕೊಂಡಿದ್ದನು.

ಇತ್ತ ಲವ್‌ನಲ್ಲಿ ಬಿದ್ದ ರಮ್ಯಳಿಗೆ ಓದಿನ ಬಗ್ಗೆ ಆಸಕ್ತಿಯೇ ಇಲ್ಲವಾಗಿತ್ತು. ಹಾಗಾಗಿ ಹೇಗೂ ಮುಕುಂದ ಲವ್ ಮಾಡ್ತಾ ಇದ್ದಾನೆ ಆದ್ದರಿಂದ ಆತನನ್ನು ಮದುವೆಯಾಗಿ ಲೈಫ್ ಸೆಟ್ಲ್ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದಳು. ಆ ಬಗ್ಗೆ ಮುಕುಂದನಲ್ಲಿ ಕೂಡ ಹೇಳಿದ್ದಳು. ಆದರೆ ಮುಕುಂದ ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳದೆ ಮದುವೆಯೆಲ್ಲಾ ಈಗ ಏಕೆ ಇನ್ನು ಟೈಮ್ ಇದೆ ಮುಂದೆ ನೋಡೋಣ ಎನ್ನುತ್ತಾ ಜಾರಿಕೊಂಡಿದ್ದನು. ಆದರೆ ರಮ್ಯ ಸಿಕ್ಕಾಗಲೆಲ್ಲಾ ಮದುವೆ ಬಗ್ಗೆಯೇ ಮಾತನಾಡ ತೊಡಗಿದ್ದಳು. ಇದು ಮುಕುಂದನ ತಲೆಕೆಡಿಸಿತ್ತು. ಅವಳು ಲವ್‌ನ್ನು ಇಷ್ಟು ಸೀರಿಯಸ್ ಆಗಿ ತೆಗೆದುಕೊಂಡು ಮದುವೆಗೆ ಒತ್ತಾಯಿಸುತ್ತಾಳೆ ಎಂಬ ಅರಿವು ಆತನಿಗಿರಲಿಲ್ಲ. ತನ್ನ ಉದ್ದೇಶ ಎಲ್ಲಾ ಉಲ್ಟಾ ಹೊಡೀತಲ್ಲ ಎಂಬ ಭಯ ಪ್ರಾರಂಭವಾಗಿತ್ತಲ್ಲದೆ, ಆಕೆಯನ್ನು ತಪ್ಪಿಸಿಕೊಂಡು ಓಡಾಡಲು ಪ್ರಾರಂಭಿಸಿದ್ದನು.

ಮದುವೆಯಾಗಲು ಒತ್ತಾಯ :
ಇದು ರಮ್ಯಳಿಗೆ ಭಯ ಹುಟ್ಟಿಸಿತ್ತು. ಇನ್ನು ಈತ ಕೈಕೊಡುವುದು ಗ್ಯಾರಂಟಿ ಎಂಬ ಅನುಮಾನಗಳು ಪ್ರಾರಂಭವಾಗಿತ್ತು. ಮನೆಯಲ್ಲಿಯೂ ಇವಳ ಆಟಗಳು ತಿಳಿದು ಹೋಗಿತ್ತು. ಬೇರೆ ದಾರಿ ಕಾಣದ ಆಕೆ ಮುಕುಂದನನ್ನೇ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಳು. ಆದರೆ ಮುಕುಂದ ತನ್ನಿಂದ ದೂರ ಸರಿಯಲು ಪ್ರಯತ್ನಿಸುತ್ತಿರುವುದು ಅವಳಲ್ಲಿ ಭಯ ಹುಟ್ಟಿಸಿತ್ತು. ಆದರೆ ಪಟ್ಟು ಬಿಡದ ಆಕೆ ನೀನು ನನ್ನನ್ನು ಮದುವೆಯಾಗಲೇಬೇಕು ಇಲ್ಲಾಂದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುತ್ತಿದ್ದಳು. ಇದು ಮುಕುಂದನಿಗೆ ಇನ್ನಷ್ಟು ತಲೆನೋವು ತಂದಿತ್ತು.

ಈಗ ಎದುರಾಗಿರುವ ಸಮಸ್ಯೆಯಿಂದ ಪಾರಾಗುವ ಬಗ್ಗೆ ತನ್ನ ಪಟಾಲಂನ ರಾಘವೇಂದ್ರ ಅಲಿಯಾಸ್ ರಾಘು, ಶ್ರೀಕಾಂತ ಮತ್ತು ಹರೀಶ ಎಂಬುವರಿಂದ ಸಲಹೆ ಕೇಳಿದ್ದ ಅದಕ್ಕೆ ಅವರುಗಳು ಅಯ್ಯೋ ಅದ್ಯಾಕೆ ತಲೆಕೆಡಿಸಿಕೊಳ್ಳುತ್ತೀಯ, ಆಕೆ ಏನಾದರು ನಖರಾ ಮಾಡಿದರೆ ನಮಗೆ ಪೋನ್ ಮಾಡು ಅವಳನ್ನು ಎತ್ತಿಬಿಡೋಣ ಎಂದಿದ್ದಾರೆ. ಸ್ನೇಹಿತರು ಹೇಳೋದು ನಿಜಾನೇ, ಮುಗಿಸಿದರೆ ನೆಮ್ಮದಿಯಾಗಿರಬಹುದು ಎಂಬ ಆಲೋಚನೆ ಮುಕುಂದನಿಗೆ ಬಂದಿದೆ.

ಅವತ್ತು ಡಿಸೆಂಬರ್ 6. ಸೋಮವಾರ. ಕಾಲೇಜಿಗೆಂದು ಮನೆಯಿಂದ ಬೆಳಿಗ್ಗೆ ಹೊರಟು ಹೋದ ರಮ್ಯ ನಂತರ ನೇರವಾಗಿ ಕೆಆರ್‌ಎಸ್‌ಗೆ ಹೋಗಿದ್ದಾಳೆ. ಬಳಿಕ ಮುಕುಂದನಿಗೆ ಪೋನ್ ಮಾಡಿ ನಾನು ಕೆಆರ್‌ಎಸ್‌ನಲ್ಲಿದ್ದೇನೆ ನೀನು ಅಲ್ಲಿಗೆ ಬಂದು ಬಿಡು ಎಂದು ಹೇಳಿದ್ದಾಳೆ. ಆದರೆ ಮುಕುಂದ ನೆಪ ಹೇಳಿ ತಪ್ಪಿಸಿಕೊಂಡಿದ್ದಾನೆ. ಆದರೆ ಮೇಲಿಂದ ಮೇಲೆ ಪೋನ್ ಮಾಡುತ್ತಾ ನೀನು ಈಗ ಇಲ್ಲಿಗೆ ಬರದಿದ್ದರೆ ನಾನು ನಿನ್ನ ಹೆಸರು ಬರೆದಿಟ್ಟು ಕೆಆರ್‌ಎಸ್ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದಾಳೆ. ಇದಕ್ಕೆ ಬೆದರಿದ ಮುಕುಂದ ನೇರವಾಗಿ ಕೆಆರ್‌ಎಸ್‌ಗೆ ಹೋಗಿ ಅವಳಿಗೆ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾನೆ. ಆದರೆ ಆಕೆ ನೀನು ನನ್ನನ್ನು ಮದುವೆ ಆಗಲೇಬೇಕು ಇಲ್ಲಾಂದ್ರೆ ನಾನು ನಿನ್ನ ಹೆಸರು ಬರೆದಿಟ್ಟು ಸಾಯುವುದಾಗಿ ಹೆದರಿಸಿದ್ದಾಳೆ. ಬೇರೆ ದಾರಿ ಕಾಣದೆ ಮುಕುಂದ ಸರಿ ಆಯ್ತು ನಾವಿಬ್ಬರೂ ಮದುವೆಯಾಗೋಣ ನನ್ನ ಫ್ರೆಂಡ್ಸ್‌ಗೆ ಫೋನ್ ಮಾಡಿ ಕರೆಸುವುದಾಗಿ ಹೇಳಿದ್ದಾನೆ.

ಹತ್ಯೆಗೆ ಸ್ಕೆಚ್ :
ಅವಳಿಂದ ಸ್ವಲ್ಪ ದೂರ ಹೋಗಿ ಗೆಳೆಯರಾದ ಶ್ರೀಕಾಂತ್, ರಾಘವೇಂದ್ರ, ಹರೀಶ್‌ಗೆ ಫೋನ್ ಮಾಡಿ ನಾನು ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ರಮ್ಯ ಮದುವೆ ಮಾಡ್ಕೊ ಇಲ್ಲಾಂದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಠ ಹಿಡಿದಿದ್ದಾಳೆ ಏನು ಮಾಡೋದು ಎಂದು ಕೇಳಿದ್ದಾನೆ. ಅದಕ್ಕೆ ಅವರು ರಾತ್ರಿಯಾಗುವತನಕ ಅಲ್ಲೇ ಇರು ನಾವು ಬರುತ್ತೇವೆ ಅಲ್ಲಿಯೇ ಮುಗಿಸಿ ಬಿಡೋಣ ಎಂದಿದ್ದಾರೆ. ಸರಿ ಯಾವುದಕ್ಕೂ ನೀವು ಬನ್ನಿ ಎಂದಿದ್ದಾನೆ. ಅಲ್ಲಿಂದ ರಮ್ಯಳ ಬಳಿ ಹೋಗಿ ನನ್ನ ಫ್ರೆಂಡ್ಸ್ ಬರ್‍ತಿದ್ದಾರೆ ಅವರು ನಮಗೆ ಮದುವೆ ಮಾಡ್ತಾರಂತೆ ಎಂದು ಭೋಂಗು ಬಿಟ್ಟಿದ್ದಾನೆ. ಇದನ್ನು ಆ ಕ್ಷಣಕ್ಕೆ ರಮ್ಯ ಕೂಡ ನಿಜವೆಂದು ನಂಬಿದ್ದಾಳೆ.

ರಾತ್ರಿಯಾಗುತ್ತಿದ್ದಂತೆಯೇ ಗೆಳೆಯರಾದ ಶ್ರೀಕಾಂತ್, ರಾಘವೇಂದ್ರ, ಹರೀಶ ಕೆಆರ್‌ಎಸ್‌ಗೆ ಬಂದಿದ್ದಾರೆ. ಸ್ವಲ್ಪ ಹೊತ್ತು ಅಲ್ಲಿಯೇ ಅಡ್ಡಾಡಿದ್ದಾರೆ. ಹೇಗಾದರು ಮಾಡಿ ರಮ್ಯಳನ್ನು ಅಲ್ಲೇ ಮುಗಿಸಿಬಿಡಲು ಸ್ಕೆಚ್ ಹಾಕಿದ್ದಾರೆ. ಆದರೆ ಅಲ್ಲಿ ರಮ್ಯನನ್ನು ಮುಗಿಸುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುವುದು ಗೊತ್ತಾಗಿದೆ. ಹಾಗಾಗಿ ಅವಳನ್ನು ಕರದುಕೊಂಡು ಮತ್ತೆ ಮೈಸೂರಿಗೆ ಬಂದಿದ್ದಾರೆ. ಹೂಟಗಳ್ಳಿಯ ರಸ್ತೆ ಬದಿಯಲ್ಲಿ ರಮ್ಯಳಿಗೆ ಗೋಬಿ ಮಂಚೂರಿ ಕೊಡಿಸಿ ತಾವು ಕೂಡ ತಿಂದಿದ್ದಾರೆ. ಮಧ್ಯ ರಾತ್ರಿಯಾದುದರಿಂದ ಆಕೆ ಭಯಗೊಂಡಿದ್ದಾಳೆ. ಅವಳನ್ನು ಸಮಾಧಾನಪಡಿಸಿದ ಮುಕುಂದ ಇಲ್ಲಿ ಬೇಡ ನಂಜನಗೂಡಿಗೆ ಹೋಗಿ ಮದುವೆ ಆಗೋಣ ಅಲ್ಲಿಗೆ ಹೋಗಲು ಫ್ರೆಂಡ್‌ನ ಆಟೋವನ್ನು ತರಿಸುವುದಾಗಿ ಹೇಳಿ ಗೂಡ್ಸ್ ಆಟೋ ಹೊಂದಿರುವ ಗೊದ್ದನಪುರದಹುಂಡಿ ಮಹೇಶನನ್ನು ಕರೆಯಿಸಿಕೊಂಡು ಆತನ ಆಟೋದಲ್ಲಿ ನಂಜನಗೂಡಿನತ್ತ ಹೊರಟಿದ್ದಾರೆ.

ಕತ್ತಿಗೆ ವೇಲ್ ಬಿಗಿದರು : ರಾತ್ರಿಯಾದುದರಿಂದ ಆಟೋದಲ್ಲಿ ಕುಳಿತ ಆಕೆ ನಿದ್ದೆಗೆ ಜಾರಿದ್ದಾಳೆ. ರಾಂಪುರದ ಬಳಿ ಇದೇ ಸರಿಯಾದ ಸಮಯ ಎಂದರಿತ ಮುಕುಂದ ಗೆಳೆಯರೊಂದಿಗೆ ಸೇರಿ ಹತ್ಯೆಗೆ ಮುಂದಾಗಿದ್ದಾನೆ. ಒಬ್ಬ ಆಕೆಯ ಬಾಯಿಯನ್ನು ಬಿಗಿಯಾಗಿ ಮುಚ್ಚಿ ಹಿಡಿದರೆ ಉಳಿದವರು ವೇಲ್‌ನಿಂದ ಕುತ್ತಿಗೆಯನ್ನು ಬಿಗಿದಿದ್ದಾರೆ. ಅಲ್ಲಿಗೆ ಕಮಕ್ ಕಿಮಕ್ ಎನ್ನದೆ ರಮ್ಯ ಪ್ರಾಣಬಿಟ್ಟಿದ್ದಾಳೆ. ಆಕೆ ಸತ್ತಿರುವುದನ್ನು ದೃಢಪಡಿಸಿಕೊಂಡ ಹಂತಕರು ಬಳಿಕ ಹದಿನಾರು-ನಂಜನಗೂಡು ರಸ್ತೆಯ ಕೆಂಪಿಸಿದ್ದನಹುಂಡಿ ಗ್ರಾಮದ ರಸ್ತೆಯಲ್ಲಿ ಆಕೆಯ ಶವವನ್ನು ಎಸೆದು ಗುರುತು ಸಿಗದಂತೆ ಮಾಡುವ ಉದ್ದೇಶದಿಂದ ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ.

ಡಿಸೆಂಬರ್ 7ರಂದು ಅರೆ ಬೆಂದ ಸ್ಥಿತಿಯಲ್ಲಿದ್ದ ಯುವತಿಯ ಶವವನ್ನು ರಸ್ತೆ ಬದಿಯಲ್ಲಿ ಕಂಡ ಗ್ರಾಮದ ಕೆ.ಎಸ್.ಮರಿ ಎಂಬುವರು ನಂಜನಗೂಡು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿ ಶವವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ ಬಳಿಕ ಹಂತಕರಿಗಾಗಿ ಇನ್ಸ್‌ಪೆಕ್ಟರ್ ಪ್ರಮೋದ್‌ಕುಮಾರ್, ಎಸ್‌ಐ ರಾಘವೇಂದ್ರ, ಎಎಸ್‌ಐ ತಿಮ್ಮನಾಯಕ ಹಾಗೂ ಸಿಬ್ಬಂದಿಗಳಾದ ಲಿಂಗರಾಜು, ಮಹೇಶ, ಮಹದೇವಶೆಟ್ಟಿ, ಕೃಷ್ಣಗೌಡ, ಪ್ರಸನ್ನಕುಮಾರ್, ಮಹೇಶ್, ಮಲ್ಲು, ಚಾಲಕರಾದ ಚಂದ್ರಶೇಖರ್ ಅವರುಗಳು ತೀವ್ರ ಕಾರ್ಯಾಚರಣೆಗಿಳಿದರು.

ಹಂತಕರು ಸಿಕ್ಕಿ ಬಿದ್ದರು : ಡಿಸೆಂಬರ್ 24ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುತ್ತಿದ್ದ ಪೊಲೀಸರಿಗೆ ಗೊದ್ದನಪುರದಹುಂಡಿ ಗ್ರಾಮದ ಮಹೇಶನ ಗೂಡ್ಸ್ ಆಟೋ(ಕೆಎ 09-ಬಿ3043) ಓಡಾಡಿರುವ ಬಗ್ಗೆ ಮಾಹಿತಿ ದೊರೆತಿತ್ತು. ಅದರಂತೆ ಮಹೇಶನ ಹಿಂದೆ ಬಿದ್ದ ತನಿಖಾ ತಂಡಕ್ಕೆ ಆತನ ವರ್ತನೆ ಸಂಶಯವನ್ನು ಹುಟ್ಟು ಹಾಕಿತ್ತು. ಅದರಂತೆ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ನನಗೇನು ಗೊತ್ತಿಲ್ಲ ಎಂದು ಮೊದಲಿಗೆ ಹೇಳಿದನಾದರೂ ನಂತರ ಪೊಲೀಸ್ ಸ್ಟೈಲ್‌ನಲ್ಲಿ ಕೇಳಿದಾಗ ಕೊಲೆಯಾದ ಹುಡುಗಿ ರಮ್ಯಳೆಂದೂ, ಆಕೆಯನ್ನು ಮದುವೆಯಾಗುವಂತೆ ಪೀಡಿಸಿದಕ್ಕೆ ಪ್ರಿಯಕರ ಮುಕುಂದ ಗೆಳೆಯರೊಂದಿಗೆ ಸೇರಿ ಹತ್ಯೆಗೈದಿರುವುದಾಗಿ ತಿಳಿಸಿದ್ದಾನೆ. ಅವನು ನೀಡಿದ ಮಾಹಿತಿ ಮೇರೆಗೆ ಮೈಸೂರಿನ ಪಡುವಾರಹಳ್ಳಿಯಲ್ಲಿದ್ದ ಹಂತಕ ಮುಕುಂದ ಹಾಗೂ ಆತನ ಸ್ನೇಹಿತರಾದ ಶ್ರೀಕಾಂತ್, ರಾಘವೇಂದ್ರ ಮತ್ತು ಹರೀಶ್ ಎಂಬುವರನ್ನು ಬಂಧಿಸಿ ಜೈಲ್‌ಗೆ ಕಳುಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+