ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲೊಂದು ನಿಸರ್ಗ ನಿರ್ಮಿತ ದೇಗುಲ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Makki Shastavu temple, Napoklu
ದೇಗುಲ ಎಂದಾಕ್ಷಣ ಗುಡಿ, ಗೋಪುರ, ಗಂಟೆಗಳ ನಿನಾದ, ಭಕ್ತರ ಸಾಲು ಇಂತಹ ದೇವಾಲಯವೊಂದರ ಕಲ್ಪನೆ ಮೂಡುತ್ತದೆ. ಆದರೆ ಕೊಡಗಿನ ನಾಪೋಕ್ಲು ಬಳಿಯಲ್ಲಿರುವ ನಿಸರ್ಗ ನಿರ್ಮಿತ ಮಕ್ಕಿ ಶಾಸ್ತಾವು ದೇವಾಲಯ ಮಾತ್ರ ಇತರೆ ದೇವಾಲಯಕ್ಕಿಂತ ಭಿನ್ನವಾಗಿ ಗೋಚರಿಸುತ್ತದೆ. ಮಕ್ಕಿ ಶಾಸ್ತಾವು ದೇವಾಲಯ ನೆಲೆ ನಿಂತ ತಾಣಕ್ಕೆ ಭೇಟಿ ನೀಡಿದವರಿಗೆ ವಿಶಿಷ್ಟ ಅನುಭವವಾಗುತ್ತದೆ. ಅಲ್ಲದೆ, ಇಲ್ಲಿ ನಿಸರ್ಗವೇ ಒಂದು ಸುಂದರ ದೇವಾಲಯದಂತೆ ಗೋಚರಿಸಿಬಿಡುತ್ತದೆ.

ಗುಡಿ, ಗೋಪುರವಿಲ್ಲ: ಈ ದೇವಾಲಯವು ದಿಬ್ಬದ ಮೇಲೆ ನೆಲೆನಿಂತಿದ್ದು, ರಸ್ತೆಯಿಂದಲೇ ಸಿಗುವ ಮೆಟ್ಟಿಲುಗಳನ್ನೇರಿ ಮೇಲ್ಭಾಗಕ್ಕೆ ಬಂದರೆ ಸಮತಟ್ಟಾದ ಜಾಗದಲ್ಲಿ ಸುಮಾರು ಐದು ಅಡಿ ಎತ್ತರದ ವೃತ್ತಾಕಾರದ ಕಟ್ಟೆಯೊಂದು ಎದುರಾಗುತ್ತದೆ. ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಾಸ್ತಾವು ದೇವರ ಮೂರ್ತಿಯಿದೆ. ಅಲ್ಲದೆ ದೇವರಿಗೆ ಆಶ್ರಯವಾಗಿ ಒಂದು ಹಲಸಿನ ಮರವಿದ್ದು ಸುತ್ತಲೂ ಹರಕೆಯಾಗಿ ಅರ್ಪಿಸಿದ ಮಣ್ಣಿನ ನಾಯಿಗಳಿವೆ. ಈ ದೇವಾಲಯದ ಹಲಸಿನ ಮರದಲ್ಲೊಂದು ಕಬ್ಬಿಣದ ಸರಪಳಿ ಸಿಕ್ಕಿಹಾಕಿಕೊಂಡಿರುವುದು ಕಾಣಸಿಗುತ್ತದೆಯಲ್ಲದೆ, ನೋಡುಗರಿಗೆ ಇದು ಕುತೂಹಲ ಮೂಡಿಸುತ್ತದೆ. ಇದರ ಬಗ್ಗೆ ಕೇಳಿದರೆ ಇಲ್ಲಿನವರು ಹೇಳುವ ದಂತ ಕಥೆ ರೋಚಕವಾಗಿದೆ.

ದಂತಕಥೆ: ಈ ದೇವಾಲಯದಲ್ಲಿ ವರ್ಷಕ್ಕೆ ಎರಡು ಬಾರಿ ಹಬ್ಬ ನಡೆಯುತ್ತದೆ. ಅದರಂತೆ ಬಹಳ ವರ್ಷಗಳ ಹಿಂದೆ ಹಬ್ಬದ ಸಂದರ್ಭ ತಿರುವಳ ಬರುತ್ತಿದ್ದ ವ್ಯಕ್ತಿಯೊಬ್ಬನನ್ನು ಯಾವುದೋ ಕಾರಣಕ್ಕೆ ಬಂಧಿಸಲಾಗಿತ್ತಂತೆ. ಆದರೆ ಹಬ್ಬದ ಸಂದರ್ಭ ಮಂತ್ರಘೋಷ ಮೇಳೈಸುತ್ತಿದ್ದಂತೆಯೇ ತಿರುವಳನ ಮೇಲೆ ದೇವರು ಅವಾಹನೆಯಾಗಿ ಬಂಧನದಿಂದ ತಪ್ಪಿಸಿಕೊಂಡು ಬಂದು ದೇವರ ಸನ್ನಿಧಿಯಲ್ಲಿ ಕೈ ಕೊಡವಿದಾಗ ಕೈಯ್ಯಲ್ಲಿದ್ದ ಖೋಳ ತುಂಡಾಗಿ ಹಲಸಿನ ಮರದಲ್ಲಿ ಸಿಲುಕಿತಂತೆ. ಅದು ಏನೇ ಇರಲಿ ಇಲ್ಲಿ ಹರಸಿಕೊಂಡರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬುವುದಕ್ಕೆ ಇಲ್ಲಿ ಪ್ರತಿವರ್ಷವೂ ಹಬ್ಬದ ಸಂದರ್ಭ ಹರಕೆಯ ರೂಪದಲ್ಲಿ ಹಾಕಲಾಗುವ ಮಣ್ಣಿನ ನಾಯಿಗಳೇ ಸಾಕ್ಷಿಯಾಗಿವೆ.

ಮಕ್ಕಿ ಶಾಸ್ತಾವು ದೇವಾಲಯವು ಕಾನನ ಹಾಗೂ ಕಾಫಿ ತೋಟಗಳ ನಡುವೆ ನೆಲೆನಿಂತಿದ್ದು, ನಿಶಬ್ದ ತಾಣವಾಗಿ ಗಮನಸೆಳೆಯುತ್ತದೆ. ಇಲ್ಲಿರುವ ಪುಟ್ಟ ಕೊಳವು ಕೂಡ ಹಲವು ವೈಶಿಷ್ಟ್ಯತೆಯನ್ನು ಹೊಂದಿದೆ.

ವಿಜೃಂಭಣೆಯ ಹಬ್ಬ: ಪ್ರತಿ ವರ್ಷ ಡಿಸೆಂಬರ್ ಹಾಗೂ ಮೇ ತಿಂಗಳಲ್ಲಿ ಈ ದೇವಾಲಯದಲ್ಲಿ ವಿಜೃಂಭಣೆಯಿಂದ ಹಬ್ಬ ನಡೆಯುತ್ತದೆ. ಈ ಸಂದರ್ಭ ಸುತ್ತ ಮುತ್ತಲಿನ ಗ್ರಾಮಗಳ ಅಸಂಖ್ಯ ಭಕ್ತರು ಇಲ್ಲಿ ನೆರೆಯುತ್ತಾರೆ. ಡಿಸೆಂಬರ್‌ನಲ್ಲಿ ನಡೆಯುವ ಹಬ್ಬವನ್ನು ಇಲ್ಲಿನವರು ಚಿಕ್ಕ ಹಬ್ಬ ಎಂದು ಕರೆಯುತ್ತಾರೆ. ಎರಡು ದಿನಗಳ ಕಾಲದ ಹಬ್ಬದ ಆಚರಣೆಯಲ್ಲಿ ಎತ್ತುಹೇರಾಟ, ದೀಪಾರಾಧನೆ, ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು, ಮೇಲೇರಿ ಮುಂತಾದ ಸಾಂಪ್ರದಾಯಿಕ ಪೂಜೆಗಳು ನಡೆಯುತ್ತವೆ.

ಎತ್ತುಹೇರಾಟ, ಕೋಲಗಳು: ಎತ್ತುಹೇರಾಟದ ಮೂಲಕ ಮೊದಲ ದಿನದ ಹಬ್ಬವು ಆರಂಭವಾಗುತ್ತದೆ. ಅಂದು ನಡು ಮಧ್ಯಾಹ್ನ ಗ್ರಾಮಸ್ಥರು ಎತ್ತುಗಳನ್ನು ಸಿಂಗರಿಸಿ ಅವುಗಳ ಬೆನ್ನಮೇಲೆ ಶ್ವೇತವಸ್ತ್ರದಲ್ಲಿ ಹರಕೆಯ ಅಕ್ಕಿಯನ್ನು ಕಟ್ಟಿ ದೇವಾಲಯಕ್ಕೆ ಕರೆತರುತ್ತಾರೆ. ಬಳಿಕ ಚಂಡೆ ವಾದ್ಯದೊಂದಿಗೆ ಅವುಗಳನ್ನು ದೇವಾಲಯದ ಕಟ್ಟೆಯ ಸುತ್ತ ಓಡಿಸಲಾಗುತ್ತದೆ. ಮಾರನೆಯ ದಿನ ಬೆಳಿಗ್ಗೆಯಿಂದಲೇ ದೇವಾಲಯದ ನಿರ್ದಿಷ್ಟ ಸ್ಥಳದಲ್ಲಿ ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು ನಡೆಯುತ್ತವೆ.

ತಿರುವಳನಿಗೆ ತೆಂಗಿನಗರಿಗಳಿಂದ ಮಾಡಿದ ಅಲಂಕೃತ ಪೋಷಾಕನ್ನು ಧರಿಸಲಾಗುತ್ತದೆ. ಬಳಿಕ ಚಂಡೆ ವಾದ್ಯ ಮೊಳಗುತ್ತಿದ್ದಂತೆಯೇ ತಿರುವಳನ ಮೇಲೆ ದೇವರು ಅವಾಹನೆಗೊಂಡು ನರ್ತಿಸುತ್ತಾ ಸಾಗುತ್ತವೆ. ಈ ಸಂದರ್ಭದ ದೃಶ್ಯ ನೆರೆದವರಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಮಧ್ಯಾಹ್ನ ಕೆಂಡದ ರಾಶಿಯ ಮೇಲೆ ಕೋಲಗಳು ಬೀಳುವ ಮೇಲೇರಿ ಕಾರ್ಯಕ್ರಮಗಳು ನಡೆಯುತ್ತವೆ. ಆ ನಂತರ ಬೆಳ್ಳಿಯ ಮುಖವಾಡ ಧರಿಸಿ ದೇವಾಲಯದ ಪ್ರಾಂಗಣಕ್ಕೆ ಬಂದು ಭಕ್ತರ ಇಷ್ಟಾರ್ಥಗಳು ನೆರವೇರಲಿ ಎಂದು ಹರಸುತ್ತದೆ. ಈ ಸಂದರ್ಭ ಭಕ್ತರು ತಮ್ಮ ಕಷ್ಟ ಸುಖಗಳನ್ನು ಹೇಳಿಕೊಂಡು ದೇವರಿಂದ ಪರಿಹಾರ ಪಡೆಯುತ್ತಾರೆ. ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ನಡೆಯುವ ದೀಪಾರಾಧನೆ ಮನಸ್ಸೆಳೆಯುತ್ತದೆ.

ನೀರವ ಮೌನ: ವರ್ಷದಲ್ಲಿ ಹಬ್ಬದ ಸಂದರ್ಭ ಮಾತ್ರ ಜನ ಸೇರುತ್ತಾರೆ. ಉಳಿದಂತೆ ದಿನನಿತ್ಯ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆಯಾದರೂ ಸದಾ ನೀರವ ಮೌನ ಇಲ್ಲಿ ನೆಲೆಸಿರುತ್ತದೆ. ಈ ತಾಣಕ್ಕೆ ಬರುವವರು ಕೊಡಗಿನ ಮಡಿಕೇರಿ ಅಥವಾ ವೀರಾಜಪೇಟೆಗೆ ಬಂದರೆ ಅಲ್ಲಿಂದ ನಾಪೋಕ್ಲುಗೆ ತೆರಳಿದರೆ ಅಲ್ಲಿನ ಬೇತು ರಸ್ತೆಯಲ್ಲಿ ಸುಮಾರು ಎರಡು ಕಿ.ಮೀ ಸಾಗಿದರೆ ಮಕ್ಕಿ ಶಾಸ್ತಾವು ತಾಣವನ್ನು ತಲುಪಬಹುದಾಗಿದೆ. ಇಲ್ಲಿಂದ ಮುಂದೆ ಪ್ರೇಕ್ಷಣೀಯ ಸ್ಥಳಗಳಾದ ಭಾಗಮಂಡಲ, ತಲಕಾವೇರಿಗೂ ತೆರಳಬಹುದಾಗಿದೆ. [ಕೊಡಗು]

English summary
Makki Shastavu Temple in Napoklu, Coorg(Kodagu) is a naturally built temple which has no shrine or garbha gudi. One can see festival like atmosphere here during December and may month. otherwise nobody bothers about the tourists and the deity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X