ಕೊಡಗಿನಲ್ಲಿ ಡಬಲ್ ಇಂಜಿನ್, ಪೋರ್ ವೀಲರ್ ದಂಧೆ

ಆದರೆ ಈ ಪದಗಳಿಗೆ ಕಳ್ಳ ಸಾಗಾಣಿಕೆ ನಡೆಸುತ್ತಿರುವ ಜಾಲದಲ್ಲಿ ತನ್ನದೇ ಆದ ಅರ್ಥವಿದೆ. ಅವರ ಪ್ರಕಾರ ಡಬಲ್ ಇಂಜಿನ್(ಎರಡು ತಲೆ ಹಾವು), ಪೋರ್‌ವೀಲರ್(ಆಮೆ), ಟುವೀಲರ್(ಬಿಳಿಗೂಬೆ), ಕಿಂಗ್ ಸಿಗರೇಟ್(ಆನೆದಂತ), ಜಾಕೆಟ್(ವಿವಿಧ ಪ್ರಾಣಿಗಳ ಚರ್ಮ).
ಈಗಾಗಲೇ ಜಿಲ್ಲೆಯಲ್ಲಿ ಕಾರ್ಯಾಚರಣೆಯಲ್ಲಿರುವ ತಂಡವೊಂದು ಬಿಳಿಗೂಬೆ, ಬೆಸಸಂಖ್ಯೆಯ ಬೆರಳನ್ನು ಹೊಂದಿರುವ ಆಮೆ ಹಾಗೂ ಎರಡು ತಲೆಯ ಹಾವನ್ನು ಮನೆಯಲ್ಲಿಟ್ಟರೆ ಶ್ರೀಮಂತಿಕೆ ವೃದ್ಧಿಯಾಗುತ್ತದೆ ಎಂಬ ಗಾಳಿ ಸುದ್ದಿಯನ್ನು ಹಬ್ಬಿಸಿ ತನ್ನ ವ್ಯವಹಾರ ಕುದುರಿಸುತ್ತಿದೆಯಲ್ಲದೆ, ಇಲ್ಲಿನ ಕೆಲವರಿಗೆ ಇವುಗಳು ಸಿಕ್ಕರೆ ನಮಗೆ ಕೊಡಿ ನಿಮಗೆ ಲಕ್ಷಾಂತರ ರೂಪಾಯಿ ಕೊಡುವುದಾಗಿ ಆಮಿಷ ಒಡ್ಡಲಾಗುತ್ತಿದೆ ಎಂಬ ಮಾತು ಕೂಡ ಕೇಳಿ ಬಂದಿದೆ.
ಸಾಮಾನ್ಯವಾಗಿ ಇಂತಹ ಪ್ರಾಣಿಗಳು ಕೊಡಗಿನಲ್ಲಿ ಕಾಣಲು ಸಿಗದ ಕಾರಣ ಮೈಸೂರು ಹಾಗೂ ಹಾಸನ ಜಿಲ್ಲೆ ಕಡೆಗೆ ತೆರಳಿದ ಕೆಲವರು ಆಮೆ ಹಾಗೂ ಹಾವುಗಳನ್ನು ಖರೀದಿಸಿ ಮಡಿಕೇರಿ ಅರಣ್ಯ ಸಂಚಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿರುವ ಪ್ರಕರಣಗಳು ನಡೆದಿವೆ.
ಈ ಬಗ್ಗೆ ನಿಗಾ ವಹಿಸಿರುವ ಮಡಿಕೇರಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಖಚಿತ ವರ್ತಮಾನದ ಮೇರೆಗೆ ಇತ್ತೀಚೆಗೆ ಮೈಸೂರು, ಹುಣಸೂರು ಮುಂತಾದ ಕಡೆ ಕಾರ್ಯಾಚರಣೆ ನಡೆಸಿ ಮಾಲು ಸಹಿತ ಆರೋಪಿಗಳನ್ನು ಬಂಧಿಸಿರುವುದನ್ನು ಸ್ಮರಿಸಬಹುದು. ಆದರೂ ಕೇರಳದಿಂದ ವ್ಯಾಪಾರಿಗಳ ವೇಷದಲ್ಲಿ ಬರುತ್ತಿರುವ ಕೆಲವರು ಇಲ್ಲಿನ ಜನರ ವಿಶ್ವಾಸಗಳಿಸಿ ಆ ಮೂಲಕ ತಮ್ಮ ವ್ಯವಹಾರವನ್ನು ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಸುತ್ತಿದ್ದಾರೆ.
ಈಗಾಗಲೇ ಹಣದ ಆಮಿಷಕ್ಕೊಳಗಾಗಿ ಆನೆದಂತ, ಹುಲಿಚರ್ಮ ಕಳ್ಳಸಾಗಾಣಿಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕೊಡಗಿನ ಯುವಕರು ಸಿಕ್ಕಿಬೀಳುತ್ತಿದ್ದು, ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವವರು ಯಾರು ಎಂಬುವುದು ಮಾತ್ರ ರಹಸ್ಯವಾಗಿಯೇ ಉಳಿದಿದೆ.












Click it and Unblock the Notifications