ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ರೂ.904 ಕೋಟಿ

ಕಳೆದ ಏಪ್ರಿಲ್‌ನಿಂದ ಆರಂಭವಾಗಿರುವ 2010-11 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಡಿ.9ರ ವರೆಗೆ 10.12ಲಕ್ಷ ಸ್ವತ್ತುಗಳಿಂದ 904 ಕೋಟಿ ರೂ. ತೆರಿಗೆ ವಸೂಲು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು ಎಂಟೂ ವಲಯಗಳಿಂದ 1,500 ಕೋಟಿ ರೂ. ತೆರಿಗೆ ವಸೂಲು ಮಾಡುವ ಗುರಿ ಹೊಂದಲಾಗಿತ್ತು. ಇದೇ ವೇಳೆ 2008-09ನೇ ಸಾಲಿನಲ್ಲಿ 8.40 ಲಕ್ಷ ಸ್ವತ್ತುಗಳಿಂದ 748 ಕೋಟಿರೂ. ಹಾಗೂ 2009-10ನೇ ಸಾಲಿನಲ್ಲಿ 8.64 ಲಕ್ಷ ಸ್ವತ್ತುಗಳಿಂದ 795 ಕೋಟಿ ರೂ. ವಸೂಲಾಗಿತ್ತು.
ಪೂರ್ವ ವಲಯ ಪ್ರಥಮ: ಈವರೆಗೆ ವಸೂಲಾಗಿರುವ ಎಂಟೂ ವಲಯಗಳ ಪೈಕಿ ಪೂರ್ವ ವಲಯ 261.60 ಕೋಟಿ ರೂ. ತೆರಿಗೆ ಸಂಗ್ರಹಿಸಿ(ಗುರಿ-ರೂ.375 ಕೋಟಿ) ಪ್ರಥಮ ಸ್ಥಾನದಲ್ಲಿದೆ. ದಕ್ಷಿಣ ವಲಯ ಎರಡನೇ ಸ್ಥಾನ(ರೂ. 202.11 ಕೋಟಿ)ದಲ್ಲಿದ್ದು, ಮಹದೇವಪುರ ವಲಯ 117.79 ಕೋಟಿ ರೂ. ವಸೂಲಿ ಮಾಡಿ ಮೂರನೇ ಸ್ಥಾನದಲ್ಲಿದೆ.
ಆದರೆ ಆನ್‌ಲೈನ್ ಮೂಲಕ ಹೆಚ್ಚಿನ ತೆರಿಗೆ ಸಂಗ್ರಹ ಮಾಡುವ ಪಾಲಿಕೆ ಆಸೆ ಈಡೇರಿದಂತಿಲ್ಲ. ಐಟಿ ಸಿಟಿಯಲ್ಲಿ ಉದ್ಯೋಗದಲ್ಲಿರುವವರು ತಮ್ಮ ಮನೆ, ಕಚೇರಿಗಳಿಂದಲೇ ಆಸ್ತಿತೆರಿಗೆ ಪಾವತಿ ಮಾಡಲು ಅವಕಾಶ ಮಾಡಿಕೊಟ್ಟಿದ್ದರೂ ಹೆಚ್ಚಿನ ಜನಪ್ರಿಯತೆ ಪಡೆದಂತಿಲ್ಲ. ತಿಂಗಳಲ್ಲಿ ಸರ್ವೆ ಪೂರ್ಣಗೊಳ್ಳಲಿದೆ. ಪ್ರಸಕ್ತ ಸಾಲಿನಲ್ಲಿ 1,500 ಕೋಟಿ ರೂ. ಆಸ್ತಿತೆರಿಗೆ ಸಂಗ್ರಹ ಮಾಡಲು ಗುರಿ ಹೊಂದಲಾಗಿದ್ದು, ಡಿ.9ರ ವರೆಗೆ 904 ಕೋಟಿ ರೂ. ವಸೂಲು ಮಾಡಲಾಗಿದೆ. ಮುಂದಿನ ಮಾರ್ಚ್ ವೇಳೆಗೆ ಗುರಿ ತಲುಪುವ ನಿರೀಕ್ಷೆ ಇದೆ ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ ಗುರುವಾರ ತಿಳಿಸಿದರು.
ಹಿಂದಿದ್ದ ಪ್ರದೇಶಗಳ ವ್ಯಾಪ್ತಿಯ ಜೊತೆಗೆ ಹೊಸ ಪ್ರದೇಶಗಳಲ್ಲಿರುವ ಸ್ವತ್ತುಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶದಿಂದ ಸರ್ವೇ ಕಾರ್ಯ ಆರಂಭಿಸಲಾಗಿದೆ. ತೆರಿಗೆ ಪಾವತಿಸದ ಮಾಲಿಕರಿಗೆ ನೋಟಿಸ್ ನೀಡುವ ಜೊತೆಗೆ ತಪ್ಪು ಮಾಹಿತಿ ನೀಡಿದ್ದಲ್ಲಿ(wrong returns) ಅಂತಹವರಿಂದಲೂ ಬಾಕಿ ತೆರಿಗೆ ವಸೂಲು ಮಾಡಲಾಗುವುದು. ತೆರಿಗೆ ವ್ಯಾಪ್ತಿಗೆ ಬಾರದ ಸ್ವತ್ತುಗಳನ್ನು ಗುರುತಿಸುವ ಕಾರ್ಯ ತಿಂಗಳಲ್ಲಿ ಪೂರ್ಣವಾಗಲಿದೆ ಎಂದು ಸಿದ್ದಯ್ಯ ಸ್ಪಷ್ಟಪಡಿಸಿದರು.












Click it and Unblock the Notifications