ಡಿ. 8-9ರಂದು 3ನೇ ಆವೃತ್ತಿಯ ಬೆಂಗಳೂರು ನ್ಯಾನೊ

ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಜೆಎನ್‌ಸಿಎಎಸ್‌ಆರ್‌ನ (ಜವಾಹರಲಾಲ್ ನೆಹರು ಮುಂದುವರಿದ ವೈಜ್ಞಾನಿಕ ಸಂಶೋಧನಾ ಕೇಂದ್ರ) ಗೌರವಾಧ್ಯಕ್ಷ ಮತ್ತು ಕರ್ನಾಟಕ ಸರ್ಕಾರದ ವಿಷನ್ ಗ್ರೂಪ್‌ನ ಅಧ್ಯಕ್ಷ ಹಾಗೂ ನ್ಯಾನೋ ತಂತ್ರಜ್ಞಾನ ಪ್ರಮುಖ ಮಾರ್ಗದರ್ಶಕ ಪ್ರೊ. ಸಿ.ಎನ್.ಆರ್. ರಾವ್ ಅವರ ನೇತೃತ್ವದಲ್ಲಿ ಈ ಸಮ್ಮೇಳನ ನಡೆಯುತ್ತಿದೆ.
2007ರಿಂದ ಆಯೋಜಿಸಿಕೊಂಡು ಬರಲಾಗುತ್ತಿರುವ ಈ ನ್ಯಾನೋ ಮೇಳವು ದೇಶ ವಿದೇಶದಲ್ಲಿ ಹೆಸರು ಗಳಿಸಿದೆ. ಸಮಾಜಕ್ಕೆ ಮತ್ತು ಜನಸಾಮಾನ್ಯರಿಗೆ ನೆರವಾಗುವ ನ್ಯಾನೋ ತಂತ್ರಜ್ಞಾನದ ಅಭಿವೃದ್ಧಿಗೆ ಈ ಮೇಳವು ಒತ್ತಾಸರೆಯಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ನ್ಯಾನೊ 2010ರ ಮೇಳಕ್ಕಾಗಿ ಜರ್ಮನಿ, ಯುಎಸ್‌ಎ, ಯುಕೆ, ಜಪಾನ್, ಸಿಂಗಪುರ, ಸ್ವಿಟ್ಜರ್‌ಲ್ಯಾಂಡ್, ಪೋಲಾಂಡ್ ಸೇರಿದಂತೆ 12ಕ್ಕೂ ಹೆಚ್ಚು ರಾಷ್ಟ್ರಗಳು ಭಾಗವಹಿಸುತ್ತಿವೆ. ಜರ್ಮನಿ ಮೇಳದ ಪಾಲುದಾರ ರಾಷ್ಟ್ರವಾಗಿದೆ. ಜೊತೆಗೆ, ರಿಲಯನ್ಸ್ ಇಂಡಸ್ಟ್ರೀಸ್, ಇಂಡಿಯನ್ ಆಯಿಲ್ ಕಾರ್ಪೋರೇಷನ್, ಲ್ಯಾಬ್ ಇಂಡಿಯಾ, ನ್ಯಾನೊ ಪ್ರೊಫೆಸರ್, ಕೆಐಟಿವಿಇಎನ್ ಮತ್ತು ಅಡ್ವಾನ್ಸ್ ಟೆಕ್ಸ್ ಸಂಸ್ಥೆಗಳು ಪ್ರಯೋಜಕತ್ವ ವಹಿಸಿಕೊಂಡಿವೆ. 12 ರಾಷ್ಟ್ರಗಳ 200ಕ್ಕೂ ಹೆಚ್ಚು ಸಂಸ್ಥೆಗಳು/ ಕಂಪನಿಗಳು ಭಾಗವಹಿಸುತ್ತಿವೆ. 30ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 400ಕ್ಕೂ ಹೆಚ್ಚು ನಿಯೋಗಗಳು ಮೇಳಕ್ಕೆ ಭೇಟಿ ನೀಡಲಿವೆ.
ಹೂಡಿಕೆ ಮತ್ತು ಉದ್ಯೋಗಾವಕಾಶ : ನ್ಯಾನೋ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಅದರಲ್ಲೂ ಇಂಧನ ಮತ್ತು ಪರಿಸರ, ನ್ಯಾನೋ ಮೆಡಿಸಿನ್, ನ್ಯಾನೋ ಎಲೆಕ್ಟ್ರಾನಿಕ್ಸ್ ಮತ್ತು ನ್ಯಾನೋ ಮೆಟಿರಿಯಲ್ಸ್‌ಗಳಲ್ಲಿನ ಹೊಸ ಆವಿಷ್ಕಾರ ಮತ್ತು ವಿನೂತನ ಸಂಶೋಧನಾ ಯೋಜನೆಗಳನ್ನು ಸಾಕಾರಗೊಳಿಸಿಕೊಳ್ಳಲು ಬಯಸುವವರು ಮತ್ತು ಹೂಡಿಕೆದಾರರು ಹಾಗೂ ವೃತ್ತಿಪರ ಕೈಗಾರಿಕೋದ್ಯಮಿಗಳ ನಡುವೆ ಸಹಕಾರ ಬೆಸೆಯುವ ಒಂದು ವೇದಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸಿಗುವ ಉದ್ಯೋಗಾವಕಾಶ ಮತ್ತು ವಹಿವಾಟಿನ ಸಾಧ್ಯತೆಗೆ ಬಗ್ಗೆ ಅಂತಾರಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿರುವ 45ಕ್ಕೂ ಹೆಚ್ಚು ಮಂದಿ ಪರಿಣಿತರು ಮಾತನಾಡಲಿದ್ದಾರೆ.
ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟು ಕೊಂಡು ಅವರಲ್ಲಿ ನ್ಯಾನೊ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲು ನ್ಯಾನೊ ಫಾರ್ ದಿ ಯಂಗ್ (ಯುವಜನತೆಗಾಗಿ ನ್ಯಾನೊ) ಮತ್ತು ಸ್ಫೂರ್ತಿದಾಯಕ ಉಪನ್ಯಾಸ ಕಾರ್ಯಕ್ರಮಗಳನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಯುವಜನತೆಗಾಗಿ ನ್ಯಾನೊ ಎಂಬ ವಿಷಯದ ಬಗ್ಗೆ ಪ್ರೊ. ಸಿ.ಎನ್.ಆರ್. ರಾವ್ ಅವರು ಉಪನ್ಯಾಸ ನೀಡಲಿದ್ದಾರೆ. ಉಪನ್ಯಾಸ ಕಾರ್ಯಕ್ರಮವನ್ನು ಜೆಎನ್ ಟಾಟಾ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. 750ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಪದವೀದರರು ಮತ್ತು ಸ್ನಾತಕೋತ್ತರ ಪದವೀದರರು ಇದರಲ್ಲಿ ಭಾಗವಹಿಸಲಿದ್ದಾರೆ.
ಪ್ರಶಸ್ತಿ : ನ್ಯಾನೊ ವಲಯದಲ್ಲಿನ ಸಾಧನೆಯನ್ನು ಗೌರವಿಸುವ ಸಲುವಾಗಿ ಬೆಂಗಳೂರು ನ್ಯಾನೊ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರೊ. ಸಿ.ಎನ್.ಆರ್. ರಾವ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಆಯ್ಕೆ ಮಂಡಳಿಯನ್ನು ರಚಿಸಲಾಗಿದೆ. ಪ್ರಶಸ್ತಿಗಾಗಿ ಅರ್ಹರನ್ನು ಈ ತಂಡವು ಆಯ್ಕೆ ಮಾಡುತ್ತದೆ. 2007ರ ಸಾಲಿನ ಪ್ರಶಸ್ತಿಯನ್ನು ಪ್ರೊ. ಸಿ.ಎನ್.ಆರ್. ರಾವ್ ಹಾಗೂ 2008ರಲ್ಲಿ ಪ್ರೊ. ದೀಪಾಂಕರ್ ಚರ್ಕವರ್ತಿ ಅವರು ಪಡೆದುಕೊಂಡಿದ್ದರು. ಈ ಸಾಲಿನಲ್ಲಿ ಈ ಪ್ರಶಸ್ತಿಯ ಜೊತೆಗೆ ಉತ್ಸಾಹಿ ಉದ್ಯಮಿ ಪ್ರಶಸ್ತಿಯನ್ನು ಸಹ ನೀಡಲಾಗುತ್ತಿದೆ.
ಬೆಂಗಳೂರು ನ್ಯಾನೋ 2010ಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ : www.bangalorenano.in












Click it and Unblock the Notifications