ಕೆಎಸ್ಸಾರ್ಟಿಸಿ ಐರಾವತ ಕ್ಲಬ್ ಕ್ಲಾಸ್ ಬಸ್ ಗೆ ಚಾಲನೆ

Posted By:
Subscribe to Oneindia Kannada
ಬೆಂಗಳೂರು, ನ.28: ಕೆಎಸ್ ಆರ್ ಟಿಸಿಯ 'ಐರಾವತ ಕ್ಲಬ್ ಕ್ಲಾಸ್ ವೋಲ್ವೊ ಮಲ್ಟಿ ಆಕ್ಸಲ್" ನೂತನ ಅಂತಾರಾಜ್ಯ ಬಸ್‌ಗಳಿಗೆ ಶನಿವಾರ ಗೃಹ ಮತ್ತು ಸಾರಿಗೆ ಸಚಿವ ಆರ್.ಅಶೋಕ್ ವಿಧಾನಸೌಧದ ಆವರಣದಲ್ಲಿ ವಿದ್ಯುಕ್ತ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದೇಶದಲ್ಲಿಯೇ ಪ್ರಪ್ರಥಮವಾಗಿ ಇಂತಹ ಸೇವೆಯನ್ನು ಸಾರಿಗೆ ಸಂಸ್ಥೆ ನೀಡುತ್ತಿದೆ. ಪ್ರಯಾಣಿಕರು ಮಗುವಿನಂತೆ ನಿದ್ದೆ ಮಾಡಿಕೊಂಡು ಸಂಚರಿಸಬಹುದು ಎಂಬ ಘೋಷಣೆಯಡಿ ಬಸ್ ಸೇವೆಯನ್ನು ನೀಡಲಾಗುತ್ತಿದೆ ಎಂದರು.

ಬೆಂಗಳೂರಿನಿಂದ ಮುಂಬೈ, ಹೈದ್ರಾಬಾದ್ ಹಾಗೂ ಚೆನ್ನೈಗೆ ಈ ಬಸ್ ಸೇವೆ ಆರಂಭವಾಗಿದ್ದು, ಈಗ 5 ಬಸ್ ಸಂಚಾರ ನಡೆಸಲಿದೆ. ಮುಂದೆ 40 ಬಸ್‌ಗಳನ್ನು ಸಂಚಾರಕ್ಕಾಗಿ ರಸ್ತೆಗಿಳಿಸಲಾಗುವುದು. ಒಂದು ಬಸ್‌ಗೆ 85 ಲಕ್ಷ ರೂ.ಖರ್ಚು ಮಾಡಲಾಗಿದ್ದು, ಅತ್ಯಾಧುನಿಕ ಸೇವೆ, ಸೌಲಭ್ಯಗಳನ್ನು ಈ ಬಸ್‌ನಲ್ಲಿ ನೀಡಲಾಗುತ್ತಿದೆ ಎಂದರು.

ಜಿಪಿಎಸ್ ಅಳವಡಿಕೆ: ರಾಜ್ಯ ರಸ್ತೆ ಸಾರಿಗೆ ಸಂಸ್ಧೆಯ ಬಸ್‌ಗಳು ನಿಗದಿತ ಸಮಯದಲ್ಲಿ ಸಂಚರಿಸಲು ಹಾಗೂ ಪ್ರಯಾಣಿಕರಿಗೆ ಆಗುವ ವಿವಿಧ ರೀತಿಯ ತೊಂದರೆ, ಕಿರಿಕಿರಿಗಳನ್ನು ತಪ್ಪಿಸಲು ಸಾರಿಗೆ ಸಂಸ್ಧೆಯ ಎರಡು ಸಾವಿರ ಬಸ್‌ಗಳಿಗೆ ಜಿಪಿಎಸ್ ವ್ಯವಸ್ಧೆ ಅಳವಡಿಸಲು ನಿರ್ಧರಿಸಿದೆ ಎಂದು ಅಶೋಕ್ ತಿಳಿಸಿದರು.

ಮುಂದಿನ 9 ತಿಂಗಳೊಳಗೆ ಈ ವ್ಯವಸ್ಥೆಯನ್ನು ಮಾಡಲಾಗುವುದು. ಇದರಿಂದ ಬಸ್ ಯಾವ ಮಾರ್ಗವಾಗಿ ಸಂಚರಿಸುತ್ತಿದೆ. ಎಷ್ಟು ಸಮಯದೊಳಗೆ ತಲುಪಬಹುದು ಎಂಬಿತ್ಯಾದಿ ವಿವರಗಳನ್ನು ನಾವು ಪಡೆಯಬಹುದಾಗಿದೆ. 2012ರ ಮಾರ್ಚ್ ವೇಳೆಗೆ ಸಂಪೂರ್ಣವಾಗಿ ಜಿಪಿಎಸ್ ಅಳವಡಿಸಲಾಗುವುದು ಎಂದರು.

ಈ ಜಿಪಿಎಸ್ ಅಳವಡಿಕೆಗೆ ಹತ್ತು ಕೋಟಿ ರೂ. ವೆಚ್ಚವಾಗಲಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರ ತಲಾ ಐದು ಕೋಟಿ ರೂ. ಭರಿಸಲಿದೆ. ಜಿಪಿಎಸ್ ವ್ಯವಸ್ಧೆಗಾಗಿ ಪ್ರತಿ ಬಸ್ ನಿಲ್ದಾಣದಲ್ಲೂ ಹೊಸದಾಗಿ ಕಂಟ್ರೋಲ್ ರೂಂ ಸ್ಧಾಪಿಸಲಾಗುವುದು ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka State Regional Transport Corporation Airavata Club Class AC Volvo Bus with first multi axle system launched last day by Transport minister R Ashok. He said, soon GPS will be implemented to track KSRTC buses and project would be fully operational from March 2012.
Please Wait while comments are loading...