ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಹಟಮಾರಿತನಕ್ಕೆ ಬೆಚ್ಚಿದ ಹೈಕಮಾಂಡ್

By Mahesh
|
Google Oneindia Kannada News

Yeddyurappa rules out resigning over land scam issue
ಬೆಂಗಳೂರು, ನ.21: 'ನಾನೇನೂ ತಪ್ಪು ಮಾಡಿಲ್ಲ, ನಾನೇಕೆ ಅಧಿಕಾರ ಬಿಡಬೇಕು?' ಎಂದು ಪಕ್ಷದ ಹೈಕಮಾಂಡ್ ಮುಖ ಹೊಡೆದಂತೆ ಮಾತನಾಡಿ ಸವಾಲು ಹಾಕಿರುವ ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ಹಠಮಾರಿತನದಿಂದ ಪಕ್ಷದ ವರಿಷ್ಠರು ಕರ್ನಾಟಕ ಸರಕಾರದ ನಾಯಕತ್ವ ವಿಚಾರದಲ್ಲಿ ತಕ್ಷಣ ನಿರ್ಧಾರ ಕೈಗೊಳ್ಳಲಾಗದ ಸ್ಥಿತಿಯನ್ನು ನಿರ್ಮಿಸಿದ್ದು, ಕೋರ್ ಕಮಿಟಿ ಮಾತುಕತೆ ಮುಂದುವರೆಯಲಿದ್ದು, ಇನ್ನೂ ಏನನ್ನೂ ನಿರ್ಧರಿಸಲಾಗದ ಸ್ಥಿತಿಯಲ್ಲಿದೆ. ಆದರೆ, ರಾಷ್ಟ್ರೀಯ ಸುದ್ದಿ ವಾಹಿನಿಗಳು ಯಡಿಯೂರಪ್ಪ ಅವರಿಗೆ ರಾಜೀನಾಮೆ ನೀಡಲು ಹೈ ಕಮಾಂಡ್ ಸೂಚಿಸಿದೆ. ಆದರೆ, ಅಧಿಕೃತವಾಗಿ ಹೇಳಿಕೆ ನೀಡಿಲ್ಲ ಎಂದು ಪ್ರಸಾರ ಮಾಡಿತ್ತು. ಇದು ಒಂದಷ್ಟು ಗೊಂದಲ, ಗುಸುಗುಸು, ಗಾಳಿಸುದ್ದಿಗೆ ಗ್ರಾಸವಾಗಿತ್ತು.

ರಾಜೀನಾಮೆ ನೀಡಲು ಅಕಸ್ಮಾತ್ ಬಿ.ಎಸ್. ಯಡಿಯೂರಪ್ಪ ಅವರು ಒಪ್ಪಿ ಬಿಟ್ಟರೆ, ಯಾರನ್ನು ಸಿಎಂ ಸ್ಥಾನದಲ್ಲಿ ಕೂರಿಸಬೇಕು ಎಂಬ ಚಿಂತನೆಯಲ್ಲಿ ಹೈ ಕಮಾಂಡ್ ಇದೆ. ರಾಜ್ಯದ ಮುಖಂಡರೊಡನೆ ಪ್ರತ್ಯೇಕವಾಗಿ ಮಾತುಕತೆ ನಡೆಸಿರುವ ಪಕ್ಷದ ವರಿಷ್ಠರು ಅಭಿಪ್ರಾಯ ಸಂಗ್ರಹ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಜ್ಯ ಬಿಜೆಪಿ ಸಮರ್ಥ ನಾಯಕತ್ವದ ಕೊರತೆಯನ್ನು ಎದುರಿಸುತ್ತಿರುವುದರಿಂದ ಮುಖ್ಯಮಂತ್ರಿ ಬದಲಾವಣೆಗೆ ಒತ್ತು ನೀಡಲು ಹಿಂದೆ ಮುಂದೆ ಯೋಚಿಸುತ್ತಿದೆ. ಆದರೂ, ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ಬಣಗಳ ನಡುವೆ ತಿಕ್ಕಾಟಗಳೂ ನಡೆದಿವೆ.

ರಾಜೀನಾಮೆ ನೀಡಲು ಸಿಎಂ ನಕಾರ: ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದ ಒಳಗಡೆ ಎದ್ದಿರುವ ಪ್ರಶ್ನೆಗಳಿಗೆ ತಿರುಗೇಟು ನೀಡಿರುವ ಯಡಿಯೂರಪ್ಪ, ಮುಂದಿನ ಎರಡೂವರೆ ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ. ಹಾಗೆ ಬೇರೆ ಯಾರಿಗಾದರೂ ಮುಖ್ಯಮಂತ್ರಿಯಾಗಬೇಕೆಂದು ಆಸೆಯಿದ್ದರೆ, ಅವರು ಚುನಾವಣೆಯನ್ನು ಎದುರಿಸಲಿ, ನನ್ನ ತಲೆದಂಡ ಮಾಡುವ ಮುನ್ನ ಬಲಾಬಲದ ಪರೀಕ್ಷೆ ನಡೆದೇ ಬಿಡಲಿ ಎಂದು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸಿದ ಯಡಿಯೂರಪ್ಪ, ಬೆಂಬಲಿಗರೊಂದಿಗೆ ದೆಹಲಿಗೆ ಪ್ರಯಾಣಿಸಿದ್ದಾರೆ. ಕೋರ್ ಕಮಿಟಿ ಜೊತೆಗೆ ಪಕ್ಷದ ಹಿರಿಯ ಜೀವಿ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

ಹೈಕಮಾಂಡ್ ಗೆ ಬಿಸಿ ತುಪ್ಪವಾದ ಯಡ್ಡಿ : ಯಡಿಯೂರಪ್ಪ ಅವರ ಬೆದರಿಕೆಗೆ ಬೆಚ್ಚಿರುವ ನಿತಿನ್ ಗಡ್ಕರಿ ನೇತೃತ್ವದ ಕೋರ್ ಕಮಿಟಿ ಪಕ್ಷ ಹೋಳಾಗದಂತೆ ತಡೆಯಬೇಕಾದರೆ ಲಿಂಗಾಯತ ನಾಯಕ ಯಡಿಯೂರಪ್ಪ ಅವರ ಮನವೊಲಿಕೆ ಅಗತ್ಯ ಎಂದು ಮನಗಂಡಿದೆ. ಕೋರ್ ಕಮಿಟಿ ಸಭೆಯಲ್ಲಿ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಲೆಹರ್ ಸಿಂಗ್, ಅನಂತ್ ಕುಮಾರ್, ಕೆ.ಎಸ್. ಈಶ್ವರಪ್ಪ, ಡಿ.ವಿ. ಸದಾನಂದ ಗೌಡ ಮುಂತಾದವರಿಗೆ ಮತ್ತೆ ಮತ್ತೆ ಯಡಿಯೂರಪ್ಪ ಅವರ ರಾಜೀನಾಮೆ ವಿಷ್ಯ ಕಗ್ಗಂಟಾಗಿ ತೋರುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X